ಕಾರವಾರದ ಅಮಿತ ಮಾಳಸೆಕರ್ ಅವರು ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಸಿಲುಕಿ ಸಾವನಪ್ಪಿದ್ದಾರೆ. ಮನೆಯವರು ಅವರಿಗೆ ನೀರು ಕುಡಿಸಿ ಉಪಚರಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಮಿತ ಮಾಳಸೆಕರ್ (38) ಅವರು ಕಾರವಾರದ ಬಿಣಗಾದ ಮಾಳಸವಾಡದಲ್ಲಿ ವಾಸವಾಗಿದ್ದರು. ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದ ಅವರು ಮದ್ಯ ವ್ಯಸನಕ್ಕೆ ಅಂಟಿದ್ದರು. ಅವರ ವ್ಯಸನ ಬಿಡಿಸಲು ಕುಟುಂಬದವರು ನಾನಾ ಬಗೆಯ ಪ್ರಯತ್ನ ಮಾಡಿದ್ದರು. ಕೊನೆಗೆ 10 ದಿನದ ಹಿಂದೆ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ವೈದ್ಯರು ನೀಡಿದ ಔಷಧವನ್ನು ಅಮಿತ ಮಾಳಸೆಕರ್ ಸೇವಿಸುತ್ತಿದ್ದರು.
ಈ ನಡುವೆ ಅಗಸ್ಟ 31ರ ಮಧ್ಯಾಹ್ನ ಅಮಿತ ಮಾಳಸೆಕರ್ ಅವರು ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಸಿಲುಕಿ ತೊಂದರೆ ಅನುಭವಿಸಿದರು. ಇದನ್ನು ನೋಡಿದ ಮನೆಯವರು ತಕ್ಷಣ ನೀರು ಕುಡಿಸಿದ್ದು, ಅಲ್ಲಿಯೇ ಅಮಿತ್ ಮಾಳಸೆಕರ್ ಕುಸಿದು ಬಿದ್ದರು. ಮನೆ ಜನರು ಅವರಿಗೆ ಉಪಚಾರ ಮಾಡಿ 108ಗೆ ಫೋನ್ ಮಾಡಿದರು.
108 ಆಂಬುಲೆನ್ಸ ಮೂಲಕ ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅಮಿತ ಮಾಳಸೆಕರ್ ಈಗಾಗಲೇ ಸಾವನಪ್ಪಿದ ವಿಷಯ ಘೊಷಿಸಿದರು. ಅಮಿತ್ ಮಾಳ್ಸೇಕರ್ ಅವರ ಸಹೋದರ ವಿಶ್ವನಾಥ ಮಾಳ್ಸೆಕರ್ ಅವರು ನೀಡಿದ ಮಾಹಿತಿ ಅನ್ವಯ ಕಾರವಾರದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
