ಕುಮಟಾದಲ್ಲಿ ಮೀನು ಮಾರುಕಟ್ಟೆಹೊರತುಪಡಿಸಿ ಬೇರೆ ಕಡೆ ಮೀನು ಮಾರಾಟ ನಡೆಯುತ್ತಿದೆ. ಇದರಿಂದ ಕಲಭಾಗ ಕ್ರಾಸಿನ ಬಳಿ ವ್ಯಾಪಕ ಪ್ರಮಾಣದಲ್ಲಿ ವಾಹನ ಸಂಚಾರ ದಟ್ಟಣೆ ಆಗುತ್ತಿದೆ.
ಈ ಸಮಸ್ಯೆ ಬಗೆಹರಿಸುವಂತೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪೊಲೀಸ್ ಅಧೀಕ್ಷಕರಿಗೆ ವಾಟ್ಸಪ್ ಮಾಡಿದ್ದಾರೆ. `ಕುಮಟಾ ಮೀನು ಮಾರುಕಟ್ಟೆಯಿಂದ 200ಮೀ ಮುಂದೆ ಸಾಗಿದರೆ ಅಲ್ಲಿ ದಿನವಿಡೀ ವಾಹನ ಸಂಚಾರ ದಟ್ಟಣೆ ಕಾಣುತ್ತಿದೆ. ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡದೇ ಬೇರೆಡೆ ಮಾರಾಟ ನಡೆಯುವುದನ್ನು ತಡೆಯಬೇಕು. ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದ್ದಾರೆ.
`ಇಲ್ಲಿ ಮೀನು ಖರೀದಿಗೆ ಬರುವವರು ರಸ್ತೆ ಮೇಲೆ ವಾಹನ ನಿಲ್ಲಿಸುತ್ತಿದ್ದಾರೆ. ಮೀನು ಮಾರಾಟಗಾರರು ಸಹ ರಸ್ತೆ ಅಂಚಿನಲ್ಲಿ ತಮ್ಮ ವಾಹನ ನಿಲ್ಲಿಸುತ್ತಿದ್ದಾರೆ. ಈ ಹಿಂದೆ ಸಹ ಇಂಥ ಸಮಸ್ಯೆ ಇದ್ದು, ಅದನ್ನು ಒಮ್ಮೆ ಬಗೆಹರಿಸಲಾಗಿತ್ತು. ಇದೀಗ ಮತ್ತೆ ಅಂಥ ಸಮಸ್ಯೆ ಪುನರಾವರ್ತನೆ ಆಗಿದೆ’ ಎಂದವರು ವಿವರಿಸಿದ್ದಾರೆ. `ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ತುರ್ತಾಗಿ ಆಸ್ಪತ್ರೆಗೆ ಆಂಬುಲೆನ್ಸ್ ಹೋಗಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಅಗತ್ಯವಿದ್ದಕಡೆ ಪೊಲೀಸರನ್ನು ನೇಮಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ಗಣಪು ಮುಕ್ರಿ ಅವರು ಒತ್ತಾಯಿಸಿದ್ದಾರೆ.
