ಬಾವಿ ನೀರು ಸೇದಿ ಬಯಲಿನಲ್ಲಿ ಸ್ನಾನ ಮಾಡುತ್ತಿದ್ದ ಕಾರವಾರದ ಸಚಿನ್ ಗಾಂವಕಾರ್ ಅವರು ಅದೇ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಅರ್ದ ಸ್ನಾನದ ವೇಳೆ ಅವರು ಕಾಲು ಜಾರಿ ಬಿದ್ದಿದ್ದು, ಮೇಲೆ ಬರಲಾಗದೇ ನೀರಿನೊಳಗೆ ಕೊನೆಯುಸಿರೆಳೆದಿದ್ದಾರೆ.
ಕಾರವಾರದ ಸುಂಕೇರಿ ಬಳಿಯ ಕಠಿಣಕೋಣದಲ್ಲಿ ಸಚಿನ್ ಗಾಂವಕಾರ್ (42) ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಅಗಸ್ಟ 30ರಂದು ತಮ್ಮ ಮನೆ ಮುಂದಿನ ಬಾವಿಯಲ್ಲಿ ನೀರು ಸೇದಿ ಅವರು ಅಲ್ಲಿ ಸ್ನಾನ ಮಾಡುತ್ತಿದ್ದರು. ಅವರು ಬಾವಿಯಿಂದ ನೀರು ಸೇದುವಾಗ ಕೊಡದ ಹಗ್ಗ ರಾಟೆಯಿಂದ ಬಾವಿಗೆ ಬಿದ್ದಿತು.
ಆ ಹಗ್ಗವನ್ನು ಮತ್ತೆ ಮೇಲೆತ್ತಿ ರಾಟೆಗೆ ಸಿಗಿಸುವುದಕ್ಕಾಗಿ ಸಚಿನ್ ಗಾಂವಕಾರ್ ಅವರು ಬಾವಿಯ ಕಟ್ಟೆ ಮೇಲೆ ಹತ್ತಿದರು. ರಾಟೆಗೆ ಹಗ್ಗ ಸಿಗಿಸುವಾಗ ಕಟ್ಟೆ ಮೇಲಿಂದ ಕಾಲು ಜಾರಿ ಬಾವಿಗೆ ಬಿದ್ದರು. ಆಳವಾದ ಬಾವಿಯಲ್ಲಿ ಮುಳುಗಿದ ಅವರಿಗೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಅಲ್ಲಿಯೇ ನೀರು ಕುಡಿದು ಅವರು ಸಾವನಪ್ಪಿದರು.
ಸಚಿನ್ ಗಾಂವಕಾರ್ ಅವರ ಅಣ್ಣ ಪ್ರವೀಣ ಗಾಂವಕಾರ್ ಗೋವಾದಲ್ಲಿ ಕೆಲಸಕ್ಕಿದ್ದು, ಈ ವಿಷಯ ತಿಳಿದು ಊರಿಗೆ ಬಂದರು. ತಮ್ಮನ ಸಾವಿನ ಬಗ್ಗೆ ಕಾರವಾರ ಪೊಲೀಸ್ ಠಾಣೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.
