ಯಲ್ಲಾಪುರದ ಹುಲಿಮನೆ ಹಾಗೂ ಕುಚಗಾಂವ್ ಎದುರುಬದುರಿನ ಊರುಗಳಾಗಿದ್ದರೂ, ಹುಲಿಮನೆಯಲ್ಲಿರುವ ರತ್ನಾ ನಾಯ್ಕ ಅವರು ಕುಚಗಾಂವಿನಲ್ಲಿರುವ ತಮ್ಮ ಅಕ್ಕನನ್ನು ಮಾತನಾಡಿಸಲು 8ಕಿಮೀ ಸುತ್ತುವರೆದು ಹೋಗಬೇಕು. ಹಳ್ಳಕ್ಕೆ ಕಟ್ಟಿದ ಸೇತುವೆಯ `ಅಡ್ಡ ಪರಿಣಾಮ’ದಿಂದಾಗಿ ಇಲ್ಲಿನ ಶಶಿಕಲಾ ನಾಯ್ಕ, ಪುಷ್ಪಾ ನಾಯ್ಕ, ಶಿವಾನಂದ ನಾಯ್ಕ ಅವರೆಲ್ಲರೂ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ!
ಯಲ್ಲಾಪುರದಿಂದ ಶಿರಸಿ ರಸ್ತೆ ಮಾರ್ಗವಾಗಿ ಹುಲಿಮನೆ ಊರು ಬರುತ್ತದೆ. ಯಲ್ಲಾಪುರದಿಂದ ಮುಂಡಗೋಡು ಕಡೆ ಸಾಗುವ ದಾರಿಯಲ್ಲಿ ಕುಚಗಾಂವ್ ಊರು ಸಿಗುತ್ತದೆ. ಯಲ್ಲಾಪುರದ ಹಲವು ಹಳ್ಳಿಗಳನ್ನು ಸುತ್ತುವರೆದು ಮುಂದೆ ಸಾಗುವ ಹುಲಿಮನೆ ಹಳ್ಳಕ್ಕೆ 2019ರಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಆ ಸೇತುವೆಯೇ ಊರಿನವರ ಪಾಲಿಗೆ ಮುಳುವಾಗಿದೆ. ಹಳ್ಳದ ನಡುವೆ ನಿರ್ಮಿಸಿದ ಸೇತುವೆಗೆ ಬುಡವೂ ಇಲ್ಲ. ತುದಿಯೂ ಇಲ್ಲ. ಸರಾಗವಾಗಿ ಹರಿದು ಹೋಗುತ್ತಿದ್ದ ಹಳ್ಳದ ನೀರನ್ನು ಸೇತುವೆ ತಡೆದ ಪರಿಣಾಮ ಅಕ್ಕ-ಪಕ್ಕದ ಮಣ್ಣು ಕೊರೆತ ಶುರುವಾಗಿದ್ದು, ಸಣ್ಣದಾಗಿದ್ದ ಆ ಹಳ್ಳ ಇನ್ನಷ್ಟು ವಿಸ್ತಾರವಾಗಿದೆ. ಇದರೊಂದಿಗೆ ನಿರ್ಮಿಸಿದ ಸೇತುವೆ ಸಹ ಕುಸಿದು ಬಿದ್ದಿದ್ದರಿಂದ ಮನೆ ಮುಂದೆ ಕಾಣುತ್ತಿದ್ದ ಮುಂದಿನ ಊರು ಸಹ ಜನರಿಗೆ ದೂರವಾಗಿದೆ. ಆ ಸೇತುವೆ ನಿರ್ಮಾಣದಿಂದ ಊರಿನವರಿಗೆ ಉಪಯೋಗಕ್ಕಿಂತಲೂ ಉಪದ್ರವವೇ ಹೆಚ್ಚಾಗಿದೆ!
ಹುಲಿಮನೆಯಲ್ಲಿರುವ ರತ್ನಾ ನಾಯ್ಕ ಅವರ ಅಕ್ಕ ಸೀತಾ ಪೂಜಾರಿ ಅವರು ಕುಚಗಾಂವ್ ಗ್ರಾಮದಲ್ಲಿ ವಾಸವಾಗಿದ್ದಾರೆ. ಹುಲಿಮನೆಯ ಪುಷ್ಪಾ ನಾಯ್ಕ ಅವರ ಅಕ್ಕನ ಮನೆ ಸಹ ಕುಚಗಾಂವದಲ್ಲಿದೆ. ಹುಲಿಮನೆ ಶಿವಾನಂದ ನಾಯ್ಕ ಅವರ ಮಾವ ಕೃಷ್ಣ ಪೂಜಾರಿ ಅವರು ಕುಚಗಾಂವದಲ್ಲಿದ್ದಾರೆ. 5 ನಿಮಿಷದ ನಡೆದು ನೆಂಟರ ಮನೆ ತಲುಪುತ್ತಿದ್ದ ಹುಲಿಮನೆಯ ಜನ ಇದೀಗ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿ, ಅಲ್ಲಿಂದ ಇನ್ನೊಂದು ವಾಹನ ಹಿಡಿದು ಸಂಬoಧಿಕರ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಹುಲಿಮನೆಯಲ್ಲಿ ವಾಸವಾಗಿರುವ ಮಕ್ಕಳಿಗೆ ಲಿಂಗನಕೊಪ್ಪದ ಶಾಲೆ ಸಮೀಪ. ಅಲ್ಲಿ ಗುಣಮಟ್ಟದ ಶಿಕ್ಷಣವೂ ಸಿಗುತ್ತಿರುವುದರಿಂದ ಮಕ್ಕಳು ಅಲ್ಲಿ ಕಲಿಯಲು ಆಸಕ್ತರಾಗಿದ್ದಾರೆ. ಆದರೆ, ಅವರ ಕಲಿಕೆಗೂ ಈ ಸೇತುವೆ ಅಡ್ಡಿಯಾಗಿದೆ. ಸೇತುವೆ ಇಲ್ಲದಿರುವಾಗ ಕಾಲು ಸಂಕ ಹಾಕಿಯಾದರೂ ಅದರ ಮೂಲಕ ಜನ ಬೈಕ್ ದಾಡಿಸುತ್ತಿದ್ದರು. ಬೇಸಿಗೆ ಅವಧಿಯಲ್ಲಿ ಹಳ್ಳದ ನೀರು ಕಡಿಮೆ ಆದಾಗ ಜೀಪು-ಲಾರಿಗಳು ಬರುತ್ತಿದ್ದವು. ಅರೆಬರೆ ಸೇತುವೆ ನಿರ್ಮಿಸಿದ ಕಾರಣ ಇದೀಗ ಕಾಲು ಸಂಕದ ಮೂಲಕ ಬೈಕ್ ದಾಡಿಸುವ ಹಾಗೂ ಇಲ್ಲ. ಬೇಸಿಗೆ ಅವಧಿಯಲ್ಲಿ ಸಹ ದೊಡ್ಡ ವಾಹನ ಬರುವುದಿಲ್ಲ.
ಜನ ನೀಡಿದ ಮಾಹಿತಿ ಪ್ರಕಾರ, 7 ಲಕ್ಷ ರೂ ವೆಚ್ಚದ ಈ ಸೇತುವೆಯನ್ನು ಒಂದೇ ದಿನದಲ್ಲಿ ನಿರ್ಮಿಸಲಾಗಿದೆ. ಸೇತುವೆ ನಿರ್ಮಿಸಿದ ವರ್ಷವೇ ಸುರಿದ ಮಳೆಗೆ ಆ ಸೇತುವೆಯ ಸ್ಲಾಬ್ ಕುಸಿದಿದ್ದು, ಹಳ್ಳದಲ್ಲಿ ಹರಿಯಬೇಕಿದ್ದ ನೀರು ಅಕ್ಕ-ಪಕ್ಕದಲ್ಲಿ ಹರಿದು ಕಂದಕ ನಿರ್ಮಿಸಿದೆ. ಅದಾದ ನಂತರ ಸೇತುವೆ ಯೋಜನೆ ಪೂರ್ಣವೂ ಆಗಿಲ್ಲ. ಅರೆಬರೆ ಕಾಮಗಾರಿ ಬಗ್ಗೆ ಪ್ರಶ್ನಿಸಿದರೂ ಉತ್ತರ ಕೊಟ್ಟವರಿಲ್ಲ. ಸೇತುವೆ ಸಮಸ್ಯೆ ಬಗೆಹರಿಯದ ಕಾರಣ ಅಲ್ಲಿನ ಜನ ಮುರಿದು ಬಿದ್ದ ವಿದ್ಯುತ್ ಕಂಬಗಳಿoದ ಇನ್ನೊಂದು ಸಂಕ ನಿರ್ಮಿಸಿಕೊಂಡಿದ್ದಾರೆ. ಆದರೆ, ಅದರ ಮೇಲೆ ಮಕ್ಕಳನ್ನು ಕರೆದೊಯ್ಯುವುದು ಅಪಾಯಕಾರಿಯಾಗಿದ್ದು, ಜನರ ಜೀವ ಕಾಪಾಡುವ ನಿಟ್ಟಿನಲ್ಲಿ ಯಾವ ಕೆಲಸವೂ ಇಲ್ಲಿ ಆಗಿಲ್ಲ. ಯಲ್ಲಾಪುರ ಪಟ್ಟಣದಿಂದ 4ಕಿಮೀ ದೂರದಲ್ಲಿದ್ದರೂ ಜನರ ಬೇಡಿಕೆಗೆ ತಕ್ಕ ಅಭಿವೃದ್ಧಿ ಇಲ್ಲಿಲ್ಲ.
ಹಳ್ಳ ಹಿಡಿದ ಸೇತುವೆಯ ಬಗ್ಗೆ ಊರಿನವರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
