ಮುಂಡಗೋಡಿನ ಫರ್ನಿಚರ್ ವ್ಯಾಪಾರಿ ಮೆಹಬೂಬಲಿ ಜಮಖಂಡಿ ಅವರ ಕೊಲೆ ಆರೋಪ ಸಾಭೀತಾಗಿದ್ದು, ಕೊಲೆ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮುಖ್ಯ ಆರೋಪಿ ಇಬ್ರಾಹಿಂ ಮಮ್ಮದಸಾಬ್ ಶಿಗ್ಗಾಂವ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ ಕೊಲೆಗೆ ಸಹಕರಿಸಿದ ಅವರ ಪತ್ನಿ ನಜಿಯಾ ಇಬ್ರಾಹಿಂ ಶಿಗ್ಗಾಂವ್ ಹಾಗೂ ಸಹೋದರ ಷರೀಪ ಮಮ್ಮದಸಾಬ್ ಶಿಗ್ಗಾವ್ ಅವರಿಗೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
ಮೆಹಬೂಬಲಿ ಜಮಖಂಡಿ ಅವರು ಮುಂಡಗೋಡದಲ್ಲಿ ಪರ್ನಿಚರ್ ವ್ಯಾಪಾರ ಮಾಡಿಕೊಂಡಿದ್ದರು. ಲಕ್ಕೊಳ್ಳಿಯ ಇಬ್ರಾಹಿಂ ಶಿಗ್ಗಾಂವ್ ಅವರು ಮೆಹಬೂಬಲಿ ಜಮಖಂಡಿ ಅವರು ಮಾಡಿದ್ದ ಬಿಸಿ ಚೀಟಿಯನ್ನು 50 ಸಾವಿರ ರೂಪಾಯಿಗೆ ಪಡೆದಿದ್ದರು. ಮೊದಲು ಸಮಯಕ್ಕೆ ಸರಿಯಾಗಿ ಹಣ ಪಾವತಿಸುತ್ತಿದ್ದ ಇಬ್ರಾಹಿಂ ಶಿಗ್ಗಾಂವ್ ನಂತರ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದರು. ಆಗ ಮೆಹಬೂಬಲಿ ಜಮಖಂಡಿ ಅವರು ಇಬ್ರಾಹಿಂ ಅವರಿಗೆ ಫೋನ್ ಮಾಡಲು ಶುರು ಮಾಡಿದ್ದರು. ಇಬ್ರಾಹಿಂ ಫೋನಿಗೆ ಸಿಗದಿದ್ದಾಗ ಅವರ ಪತ್ನಿ ನಜಿಯಾ ಅವರಿಗೆ ಮೆಹಬೂಬಲಿ ಜಮಖಂಡಿ ಅವರು ಫೋನ್ ಮಾಡುತ್ತಿದ್ದರು. ಈ ಫೋನ್ ಸಂಪರ್ಕ ಮುಂದೆ ಅತಿಯಾಗಿ ಬೆಳೆದಿದ್ದು, ಮೆಹಬೂಬಲಿ ಹಾಗೂ ನಜಿಯಾ ನಡುವೆ ಮಾತುಕಥೆ ಜೋರಾಯಿತು. ಇದನ್ನು ಅರಿತ ಇಬ್ರಾಹಿಂ ಅವರಿಬ್ಬರ ಸ್ನೇಹ ಮುಂದುವರೆಯದoತೆ ತಡೆದರೂ ಅದು ಸಾಧ್ಯವಾಗಲಿಲ್ಲ.
ಮೆಹಬೂಬಲಿ ಜಮಖಂಡಿ ಅವರು ನಜಿಯಾ ಅವರಿಗೆ ಪದೇ ಪದೇ ಫೋನ್ ಮಾಡುವ ಬಗ್ಗೆ ಇಬ್ರಾಹಿ ಅವರು ತಮ್ಮ ಸಹೋದರ ಷರೀಪ ಮಮ್ಮದಸಾಬ ಶಿಗ್ಗಾಂವ್ ಅವರಿಗೆ ಹೇಳಿದ್ದರು. ಆ ವೇಳೆ ಷರೀಪ್ ಶಿಗ್ಗಾಂವ್ ಒಂದು ಕ್ರಿಮಿನಲ್ ಐಡಿಯಾ ಕೊಟ್ಟಿದ್ದು ಇಬ್ರಾಹಿಂ, ನಜಿಯಾ ಹಾಗೂ ಷರೀಪ್ ಸೇರಿ ಅದನ್ನು ಜಾರಿಗೆ ತಂದರು. ಮೆಹಬೂಬಲಿ ಜಮಖಂಡಿ ಅವರನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಈ ಮೂವರು ಸೇರಿ ಪ್ರಯತ್ನಿಸಿದರು. ಎಲ್ಲವನ್ನು ಐಡಿಯಾ ಪ್ರಕಾರವೇ ಮಾಡಿದರು. ಆದರೂ, ಕಾನೂನು ಕುಳಕೆಯಿಂದ ತಪ್ಪಿಸಿಕೊಳ್ಳಲು ಆಗದೇ ಆ ಮೂವರು ಸಿಕ್ಕಿ ಬಿದ್ದರು.
2021ರ ಡಿಸೆಂಬರ್ 30ರಂದು ಇಬ್ರಾಹಿಂ ಕೆಲಸಕ್ಕೆ ಹೋಗಲಿಲ್ಲ. ಆ ದಿನ ಮಧ್ಯಾಹ್ನ ಮೆಹಬೂಬಲಿ ಜಮಖಂಡಿ ಅವರು ಇಬ್ರಾಹಿಂ ಪತ್ನಿ ನಜಿಯಾ ಅವರಿಗೆ ಫೋನ್ ಮಾಡಿದ್ದು, ನಜಿಯಾ ಅವರು ಮೆಹಬೂಬಲಿ ಅವರನ್ನು ಮನೆಗೆ ಆಮಂತ್ರಿಸಿದರು. ರಾತ್ರಿ 9.30ಕ್ಕೆ ಮೆಹಬೂಬಅಲಿ ಮನೆಗೆ ಬರುವುದನ್ನು ತಿಳಿದು ಇಬ್ರಾಹಿಂ ಮನೆಯ ಮಂಚದ ಅಡಿ ಅಡಗಿ ಕುಳಿತಿದ್ದರು. ನಜಿಯಾ ಆಮಂತ್ರಣದ ಪ್ರಕಾರ ಮೆಹಬೂಬಅಲಿ ಮನೆಗೆ ಬಂದರು. `ನಿನ್ನ ಗಂಡ ಎಲ್ಲಿ?’ ಎಂದು ನಜೀಯಾ ಅವರನ್ನು ಪ್ರಶ್ನಿಸಿದರು. `ಅವರು ಮನೆಯಲ್ಲಿಲ್ಲ’ ಎಂದಾಗ ಮೆಹಬೂಬಲಿ ಹಿಂದಿನಿoದ ನಜಿಯಾ ಅವರನ್ನು ಹಿಡಿದರು. ಆಗ, ಮಂಚದ ಅಡಿಯಿಂದ ಹೊರಬಂದ ಇಬ್ರಾಹಿಂ ಸುತ್ತಿಗೆಯಿಂದ ಮೆಹಬೂಬಲಿ ಅವರ ತಲೆಗೆ ಬಾರಿಸಿದರು. ಕಬ್ಬಿಣದ ಪೈಪಿನಿಂದಲೂ ಹಿಡಿದು ಬಾರಿಸಿದರು. ಪರಿಣಾಮ ಮೆಹಬೂಬಅಲಿ ಅಲ್ಲಿಯೇ ಕೊನೆಯುಸಿರೆಳೆದರು.
ಮನೆ ತುಂಬ ರಕ್ತ ತುಂಬಿದ್ದು ಸಾಕ್ಷಿನಾಶ ಮಾಡುವುದಕ್ಕಾಗಿ ನಜಿಯಾ ಚಾದರದಿಂದ ಅದನ್ನು ಒರೆಸಿದರು. ಅದಾದ ನಂತರ ಆ ಚಾದರವನ್ನು ಪಾತ್ರೆಯೊಂದರಲ್ಲಿ ತುಂಬಿ ಸುಟ್ಟು ಹಾಕಿದರು. ಆ ವೇಳೆಗಾಗಲೇ ಇಬ್ರಾಹಿಂ ಅವರು ತಮಗೆ ಐಡಿಯಾ ಕೊಟ್ಟ ಸಹೋದರ ಷರೀಪ ಅವರಿಗೆ ಫೋನ್ ಮಾಡಿ ಮನೆಗೆ ಕರೆದರು. ಷರೀಪ್ ಬಂದ ನಂತರ ರಾತ್ರಿ 11 ಗಂಟೆಗೆ ಮೆಹಬೂಬಲಿ ಅವರ ಬೈಕಿನಲ್ಲಿ ಅವರ ಶವ ಹಾಕಿಕೊಂಡು ಕಲ್ಲಳ್ಳಿ-ಹನುಮಾನಗರದ ಹಳ್ಳದ ಸೇತುವೆ ಬಳಿ ತೆರಳಿದರು. ಆ ಸೇತುವೆ ಮೇಲೆ ಶವ ಮಲಗಿಸಿ, ಬೈಕನ್ನು ಹಳ್ಳಕ್ಕೆ ದೂಡಿದರು. ಮೆಹಬೂಬಲಿ ಅವರ ಶೂ ಹಾಗೂ ಮೊಬೈಲ್ ಹಳ್ಳಕ್ಕೆ ಎಸೆದು ಪರಾರಿಯಾದರು. ಒಟ್ಟಾರೆಯಾಗಿ ಈ ಪ್ರಕರಣವನ್ನು ಅಪಘಾತ ಎಂದು ಬಿಂಬಿಸಲು ಆ ಮೂವರು ಸೇರಿ ಸಂಜು ರೂಪಿಸಿದ್ದರು. ಆದರೆ, ತರಾತುರಿಯ ಕೆಲಸದಲ್ಲಿ ಮೆಹಬೂಬಲಿ ಅವರ ಕೈಯಲ್ಲಿದ್ದ ಉಂಗುರ ಕಳಚಿದ್ದು, ಅದನ್ನು ಷರೀಪ ಅವರು ಜೇಬಿಗಿಳಿಸಿದ್ದರು. ನಂತರ ಆ ಉಂಗುರವನ್ನು ಇಬ್ರಾಹಿಂ ಅವರ ಹೊಲದಲ್ಲಿರುವ ಮರದ ಕೆಳಗೆ ಅಡಗಿಸದ್ದರು.
ಈ ಪ್ರಕರಣ ನ್ಯಾಯಾಲಕ್ಕೆ ಬಂದಾಗ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗಿಕರ್ ಅವರು ಇಡೀ ಪ್ರಕರಣದ ಸಾಕ್ಷಿ ಹುಡುಕಿದರು. ಅಂದು ನಡೆದ ವಿದ್ಯಮಾನಗಳ ಬಗ್ಗೆ ನ್ಯಾಯಾಲಯಕ್ಕೆ ವಿವರವಾಗಿ ತಿಳಿಸಿದರು. ಮೂವರು ಸೇರಿ ಮೆಹಬೂಬಅಲಿ ಅವರನ್ನು ಕೊಲೆ ಮಾಡಿದನ್ನು ದಾಖಲೆಗಳ ಜೊತೆ ಹಾಜರುಪಡಿಸಿದರು. ಪೊಲೀಸ್ ಸಿಬ್ಬಂದಿ ಕರಿಬಸಪ್ಪ ಇಂಗಳೂಸೂರ ಅವರು ವಿವಿಧ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕೊಲೆ ಆರೋಪ ಸಾಭೀತಾಗಿದ್ದರಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಅವರು ಇಬ್ರಾಹಿಂ ಮಮ್ಮದಸಾಬ್ ಶಿಗ್ಗಾವಗೆ ಜೀವಾವಧಿ ಶಿಕ್ಷೆ ಜೊತೆ 10 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಷರೀಪ ಮಮ್ಮದಸಾಬ ಶಿಗ್ಗಾಂವ್ ಹಾಗೂ ನೈಜಿಯಾ ಇಬ್ರಾಹಿಂ ಅವರಿಗೆ 3 ವರ್ಷ ಜೈಲಿನ ಜೊತೆ 3 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಜೊತೆಗೆ ಮೆಹಬುಬಅಲಿ ಅವರ ಸಾವಿನಿಂದ ಸಂತ್ರಸ್ತರಾದ ಅವರ ಪತ್ನಿ ಬೇಬಿ ಆಯಿಶಾ ಅವರಿಗೂ 25 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು.
