ಕುಮಟಾ ಬಸ್ ಡಿಪೋ ಚಾಲಕ ಮಂಜುನಾಥ ಶಿರಗುಂಪಿ ಅವರು ಅನ್ಯಾಯವಾಗಿ ಮಹಿಳೆಯೊಬ್ಬರಿಂದ ಹೊಡೆತ ತಿಂದಿದ್ದಾರೆ. ಮಂಜುನಾಥ ಶಿರಗುಂಪಿ ಅವರ ತಪ್ಪಿಲ್ಲದೇ ಇದ್ದರೂ ಮಹಿಳೆಯೊಬ್ಬರು ಅವರನ್ನು ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಾರೆ.
ಮಂಜುನಾಥ ಹನುಮಂತ ಶಿರಗುಂಪಿ ಅವರು ಬಾಗಲಕೋಟೆ ಜಿಲ್ಲೆಯವರು. ಬಾದಾಮಿ ತಾಲೂಕಿನ ಅವರು ಕೆಎಸ್ಆರ್ಟಿಸಿ ಬಸ್ ಚಾಲಕರಾಗಿ ಗೌರವದಿಂದ ಜೀವನ ನಡೆಸುತ್ತಿದ್ದಾರೆ. ಸದ್ಯ ಅವರು ಕುಮಟಾ ಬಸ್ ಡಿಪೋದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಚಾಲಕ ವೃತ್ತಿಯ ಜೊತೆ ನಿರ್ವಾಹಕರಾಗಿಯೂ ಅವರು ಕೆಲಸ ಮಾಡುತ್ತಾರೆ.
ಹೀಗಿರುವಾಗ ಸೆಪ್ಟೆಂಬರ್ 1ರಂದು ಅವರು ಕುಮಟಾದಿಂದ ಭಟ್ಕಳಕ್ಕೆ ಹೋಗಲು ಬಸ್ ಹತ್ತಿದ್ದರು. ಹೆದ್ದಾರಿ ಮೂಲಕ ಅವರು ಬಸ್ಸು ಓಡಿಸುತ್ತಿದ್ದರು. ಹೊನ್ನಾವರ ತಾಲೂಕಿನ ಮಂಕಿ ಗಣೇಶ ನಗರದ ಬಳಿ ಅವರ ಬಸ್ಸಿಗೆ ಏಕಾಏಕಿ ಹಸುವಂದು ಅಡ್ಡಬಂದಿತು. ಆ ಬಸ್ಸು ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕಾಗಿ ಮಂಜುನಾಥ ಶಿರಗುಂಪಿ ಅವರು ಸ್ಟೇರಿಂಗ್’ನ್ನು ಎಡಕ್ಕೆ ತಿರುಗಿಸಿದರು.
ಆ ಬಸ್ಸಿನ ಹಿಂದೆ ಕುಂದಾಪುರದ ಸಂಗೀತಾ ರೊಡ್ರಗೀಸ್ ಹಾಗೂ ಅಶ್ವಿನ್ ಡಿಸೋಜಾ ಎಂಬಾತರು ಕಾರಿನಲ್ಲಿ ಬರುತ್ತಿದ್ದರು. ಬಸ್ಸು ಎಡಕ್ಕೆ ತಿರುಗಿದನ್ನು ಆ ಕಾರಿನಲ್ಲಿದ್ದವರು ಸಹಿಸಲಿಲ್ಲ. ಕೂಡಲೇ ಆ ಬಸ್ಸನ್ನು ಹಿಂದಿಕ್ಕಿ ಅರೆ ಜಂಕ್ಷನ್ ಬಳಿ ಅಡ್ಡಗಟ್ಟಿದರು. ಬಸ್ಸಿನ ಒಳಗೆ ಪ್ರವೇಶಿಸಿ ಚಾಲಕನನ್ನು ನಿಂದಿಸಿದರು. ಇಷ್ಟಕ್ಕೆ ಸುಮ್ಮನಾಗದ ಸಂಗೀತಾ ರೋಡ್ರಗೀಸ್ ಬಸ್ಸು ಚಾಲಕನಿಗೆ ಚಪ್ಪಲಿ ತೋರಿಸಿದರು. ಅದಾದ ನಂತರ ಅದೇ ಚಪ್ಪಲಿಯಿಂದ ಹೊಡೆದರು.
ಒಟ್ಟು ಮೂರು ಬಾರಿ ಸಂಗೀತಾ ರೋಡ್ರಗೀಸ್ ಅವರು ಮಂಜುನಾಥ ಶಿರಗುಂಪಿ ಅವರಿಗೆ ಚಪ್ಪಲಿಯಿಂದ ಬಾರಿಸಿದರು. ಇದರಿಂದ ನೊಂದ ಮಂಜುನಾಥ ಶಿರಗುಂಪಿ ಅವರು ಪೊಲೀಸ್ ದೂರು ನೀಡಿದರು. ಮಂಕಿ ಠಾಣೆಯ ಪೊಲೀಸರು ಸಂಗೀತಾ ರೊಡ್ರಗೀಸ್ ಹಾಗೂ ಅಶ್ವಿನ್ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಿದರು.
