ಪ್ರೀತಿ-ಪ್ರೇಮದ ನಾಟಕವಾಡಿ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯಲ್ಲಾಪುರದ ಶ್ರೀಕಾಂತ ಕಾಂಬ್ಳೆ ವಿರುದ್ಧ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಹೋರಾಡಿದ್ದು, ಸಂತ್ರಸ್ತ ಬಾಲಕಿಗೆ ನ್ಯಾಯ ಸಿಕ್ಕಿದೆ. ಅಪ್ರಾಪ್ತೆ ಮೇಲಿನ ಅತ್ಯಾಚಾರಿ ಶ್ರೀಕಾಂತ ಕಾಂಬ್ಳೆಗೆ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು 10 ವರ್ಷ ಜೈಲು ಶಿಕ್ಷೆ ಜೊತೆ 1.5 ಲಕ್ಷ ರೂ ದಂಡ ವಿಧಿಸಿದ್ದಾರೆ. ಆ ದಂಡದ ಮೊತ್ತವನ್ನು ಬಾಲಕಿಗೆ ಪರಿಹಾರವಾಗಿ ನೀಡುವಂತೆಯೂ ಅವರು ಆದೇಶಿಸಿದ್ದಾರೆ.
ಯಲ್ಲಾಪುರ ಹೊಸಳ್ಳಿಯ ಶ್ರೀಕಾಂತ ಕಾಂಬ್ಳೆ ಅವರು ಕಾರವಾರದಲ್ಲಿ ಬಾಡಿಗೆ ರೂಮು ಮಾಡಿಕೊಂಡು ಓದುತ್ತಿದ್ದ ಬಾಲಕಿಯ ಬೆನ್ನು ಬಿದ್ದಿದ್ದರು. ಪ್ರೀತಿ-ಪ್ರೇಮದ ನಾಟಕವಾಡಿ ಆ ಬಾಲಕಿಯನ್ನು ಬಳಸಿಕೊಂಡಿದ್ದರು. ಮದುವೆ ಆಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. 2022ರ ಮಾರ್ಚ 3ರಂದು ಬಾಲಕಿಯ ರೂಮಿಗೆ ನುಗ್ಗಿ ಸರಸ-ಸಲ್ಲಾಪದ ಫೋಟೋ ತೆಗೆದುಕೊಂಡಿದ್ದರು.
ಅದಾದ ನಂತರ `ಈ ದಿನ ನಡೆದದನ್ನು ಎಲ್ಲಾದರೂ ಹೇಳಿದರೆ ಫೋಟೋಗಳನ್ನು ಜಾಲತಾಣದಲ್ಲಿ ಬಿಡುವೆ’ ಎಂದು ಬೆದರಿಸಿದ್ದರು. ಆ ಅಶ್ಲೀಲ ಫೋಟೋಗಳನ್ನು ತೋರಿಸಿ ಬಾಲಕಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರು. `ಪೊಲೀಸ್ ದೂರು ನೀಡಿದರೂ ಫೋಟೋ ವೈರಲ್ ಮಾಡುವೆ’ ಎಂದು ಹೇಳಿ ಆ ಫೋಟೋಗಳನ್ನು ಸಂತ್ರಸ್ತ ಬಾಲಕಿಗೆ ಕಳುಹಿಸಿ ಪೀಡಿಸುತ್ತಿದ್ದರು.
ಅದಾಗಿಯೂ ಆ ಬಾಲಕಿ ಧೈರ್ಯದಿಂದ ಮಹಿಳಾ ಪೊಲೀಸರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಅದರ ಪರಿಣಾಮವಾಗಿ ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ ಕಾಂಬ್ಳೆ ವಿರುದ್ಧ ಪ್ರಕರಣ ದಾಖಲಾಯಿತು. ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಸಿದ್ದಪ್ಪ ಬಿಳಗಿ ಅವರು ವಿಚಾರಣೆ ಪೂರ್ಣಗೊಳಿಸಿ 29 ಮಾರ್ಚ 2022ರಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದರು. ಪಿಐ ಶಶಿಕಾಂತ ವರ್ಮಾ ಅವರು ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದರು.
ಪ್ರಕರಣದ ಗಂಭೀರತೆ ಅರಿತ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಆರೋಪ ಸಾಭೀತಾಗಿರುವುದನ್ನು ಗಮನಿಸಿದರು. ಶ್ರೀಕಾಂತ ಕಾಂಬ್ಳೆ ಅವರು ಮಾಡಿದ ತಪ್ಪಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದರು. ಜೊತೆಗೆ 1.5 ಲಕ್ಷ ರೂ ದಂಡ ಪಾವತಿಸಿ, ಅದನ್ನು ಸಂತ್ರಸ್ತೆಗೆ ಪರಿಹಾರ ಕೊಡಬೇಕು ಎಂದು ಆದೇಶಿಸಿದರು.
ಕಾರವಾರ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ಯು ಎಚ್ ಸಾತೇನಹಳ್ಳಿ ಅವರು ಈ ಪ್ರಕರಣದಲ್ಲಿ ಕೋರ್ಟ ಮಾನಟಿರಿಂಗ್ ಕೆಲಸ ನಿಭಾಯಿಸಿದ್ದರು. ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಸರಿಯಾ ನಾಯಕ, ವೆಂಕಟ್ರಮಣ ನಾಯ್ಕ, ಅನುಷಾ ಕಾನಡೆ, ಸುಬ್ರಹ್ಮಣ್ಯ ನಾಯ್ಕ ಅವರು ಸಾಕ್ಷಿ ಸಂಗ್ರಹ ಹಾಗೂ ಇನ್ನಿತರ ಕೆಲಸಗಳಿಗೆ ಓಡಾಟ ನಡೆಸಿದ್ದರು. ಬಾಲಕಿಗೆ ನ್ಯಾಯ ಸಿಕ್ಕಿದಕ್ಕಾಗಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಕಾರವಾರ ಡಿವೈಎಸ್ಪಿ ಗಿರೀಶ ಅವರು ಈ ಪ್ರಕರಣದಲ್ಲಿ ಮುತುವರ್ಜಿವಹಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದರು.
