ಶಿರಸಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರ ಮೇಲೆ ಮರ ಬಿದ್ದಿದೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದ ಕಾರಣ ಮರುಜನ್ಮಪಡೆದಿದ್ದಾರೆ.
ಇಲ್ಲಿನ ಪಶು ವೈದ್ಯಕೀಯ ಸಿಬ್ಬಂದಿ ಎನ್ ಎ ಪಾಲೇಕರ್ ಅವರು ಸೋಮವಾರ ಬೆಳಗ್ಗೆ ಕೆಲಸ ಮುಗಿಸಿ, ಮಧ್ಯಾಹ್ನ ಊಟಕ್ಕಾಗಿ ಮನೆ ಕಡೆ ಹೊರಟಿದ್ದರು. ಪರಿಚಯಸ್ಥರು ಬೈಕ್ ಓಡಿಸುತ್ತಿದ್ದು ಎನ್ ಎ ಪಾಲೇಕರ್ ಅವರು ಹಿಂಬದಿ ಸವಾರರಾಗಿದ್ದರು. ಆ ಬೈಕು ಶಿರಸಿ- ಬನವಾಸಿ ರಸ್ತೆಯಲ್ಲಿರುವ ಅರಣ್ಯ ಮಹಾವಿದ್ಯಾಲಯದ ಹತ್ತಿರ ಸಮೀಪಿಸಿದಾಗ ಅಲ್ಲಿದ್ದ ದೊಡ್ಡ ಮರವೊಂದು ಮುರಿದು ಬಿದ್ದಿತು.
ಆ ಮರದ ಟಿಸಿಲುಗಳು ಸವಾರರಿಬ್ಬರಿಗೆ ಬಡಿದು ಬೈಕು ಮರದ ಅಡಿ ಬಿದ್ದಿತು. ಮರದ ಅಡಿ ಸಿಲುಕಿದ್ದ ಇಬ್ಬರನ್ನು ಅಲ್ಲಿನ ಜನ ಹರಸಾಹಸದಿಂದ ಹೊರಗೆ ಎಳೆದರು. ಬೈಕ್ ಸವಾರನ ತಲೆಭಾಗಕ್ಕೆ ಮರದ ಕೊಂಬೆ ಹೊಡೆದಿದ್ದು, ಹೆಲ್ಮೆಟ್ ಧರಿಸಿದ ಕಾರಣ ಅವರು ಪ್ರಾಣ ಉಳಿಸಿಕೊಂಡರು. ಎನ್ ಎ ಪಾಲೇಕರ್ ಅವರು ಮರದ ಅಡಿ ಸಿಲುಕಿದ್ದರೂ ಹೆಚ್ಚಿಗೆ ಪೆಟ್ಟಾಗಲಿಲ್ಲ.
ಅವರಿಬ್ಬರು ನಂತರ ಸುರಕ್ಷಿತವಾಗಿ ಮನೆ ಸೇರಿದರು. ಮರ ಬಿದ್ದ ವಿಷಯ ಕೇಳಿ ಅರಣ್ಯ ಇಲಾಖೆಯವರು ಅಲ್ಲಿಗೆ ಆಗಮಿಸಿದರು. ಜೆಸಿಬಿ ಯಂತ್ರ ಬಳಸಿ ಆ ಮರ ತೆರವು ಮಾಡಿದರು. ಈ ಭಾಗದಲ್ಲಿ ಅಪಾಯಕಾರಿಯಾದ ಇನ್ನಷ್ಟು ಮರಗಳಿದ್ದು, ಅದನ್ನು ತೆರವು ಮಾಡಬೇಕು ಎಂದು ಜನ ಆಗ್ರಹಿಸಿದರು.
