ಗುತ್ತಿಗೆದಾರರ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ ಸರ್ಕಾರ ಸಕಾಲದಲ್ಲಿ ಅವರಿಗೆ ಸಂದಾಯ ಮಾಡಬೇಕಿದ್ದ ಹಣ ಪಾವತಿ ಮಾಡಿಲ್ಲ. ಬಿಲ್ ಪಾವತಿ ಆಗದೇ ಗುತ್ತಿಗೆದಾರರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
ಅನೇಕ ಗುತ್ತಿಗೆದಾರರು ಸಾಲ ಮಾಡಿ ಸರ್ಕಾರಿ ಕೆಲಸ ನಿಭಾಯಿಸಿದ್ದಾರೆ. ಅಂಥವರು ಇದೀಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲದ ಬಡ್ಡಿಯೂ ಪಾವತಿಸಲಾಗದೇ ಪರದಾಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಸರಿ ಸುಮಾರು ಕಳೆದ 4 ವರ್ಷಗಳಿಂದ ಸರ್ಕಾರ ಗುತ್ತಿಗೆದಾರರ ಹಣ ಪಾವತಿಯನ್ನು ಬಾಕಿಯಿರಿಸಿಕೊಂಡಿದೆ. ತಮ್ಮ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಗಿಲ್ಲ. ಈ ಹಿನ್ನಲೆ ಮಂಗಳವಾರ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದವರು ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಬಗ್ಗೆ ಮನವರಿಕೆ ಮಾಡಿದ್ದಾರೆ.
ಸಂಘದ ಅಧ್ಯಕ್ಷ ವಿಜಯ್ ಬಿಲಿಯೇ ನೇತೃತ್ವದಲ್ಲಿ ಸದಸ್ಯರೆಲ್ಲರೂ ಈ ದಿನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾದರು. ಗುತ್ತಿಗೆದಾರರು ಈಗಾಗಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಬಹಳಷ್ಟು ಬ್ಯಾಂಕ್ಗಳ ಮುಖಾಂತರ ಕಿರುಕುಳವನ್ನು ಅನುಭವಿಸುತ್ತಿರುವ ಬಗ್ಗೆ ವಿವರಿಸಿದರು. `ಈ ಹಿಂದೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್ ಅವರಿದ್ದ ಸಂದರ್ಭ ಶಾಸಕ ಸತೀಶ್ ಸೈಲ್ ರವರ ಅಧ್ಯಕ್ಷತೆಯಲ್ಲಿ ನಗರಸಭೆ ಆಯುಕ್ತರು ಹಾಗೂ ಗುತ್ತಿಗೆದಾರರ ಸಭೆ ನಡೆಸಲಾಗಿತ್ತು. ಅಂದು, ಗುತ್ತಿಗೆದಾರರ ಬಾಕಿ ಇರುವ ಬಿಲ್ ಮೊತ್ತ ಪಾವತಿಸಲು ಹಾಗೂ ನಗರಸಭೆಯ ನಿಧಿಯಿಂದ ಕಾಮಗಾರಿಯನ್ನು ಕೈಗೊಳ್ಳದೇ ಗುತ್ತಿಗೆದಾರರ ಬಿಲ್ ಮೊತ್ತ ಪಾವತಿಸಿದ ನಂತರವೇ ಇತರ ಕಾಮಗಾರಿಯನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಣಯಕ್ಕೆ ಬರಲಾಗಿತ್ತು’ ಎಂಬ ವಿಷಯವನ್ನು ಪ್ರಸ್ತಾಪಿಸಿದರು.
`ಸಭೆಯ ನಂತರದ ದಿನಗಳಲ್ಲಿ ಕೆಲವೊಂದು ತುರ್ತು ಕಾಮಗಾರಿಗಳ ಬಗ್ಗೆ ಟೆಂಡರ್ ಕರೆದಿದ್ದು, ಇದಕ್ಕೆ ನಾವು ಯಾವುದೇ ಆಕ್ಷೇಪಣೆ ಮಾಡಿರಲಿಲ್ಲ. ಆದರೆ ಈಗ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರ ಹಿತದೃಷ್ಟಿಯಿಂದ ಹಿಂದಿನ ಕಾಮಗಾರಿಗಳ ಬಿಲ್ ಮೊತ್ತವನ್ನು ಆದಷ್ಟು ಶೀಘ್ರದಲ್ಲಿ ಪಾವತಿಸಿದ ಬಳಿಕವೇ ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕು ಎಂದು ನಗರಸಭೆಯ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಹಿಂದಿನ ಬಾಕಿ ಬಿಲ್ ಪಾವತಿಗೆ ಪ್ರಥಮ ಆದ್ಯತೆ ನೀಡಲು ಸೂಚಿಸಬೇಕು’ ಎಂದು ಅವರು ಆಗ್ರಹಿಸಿದರು.
ಈ ವೇಳೆ ಗುತ್ತಿಗೆದಾರರಾದ ಛತ್ರಪತಿ ಮಾಲ್ಸೇಕರ, ಸತೀಶ್ ನಾಯ್ಕ್, ರಾಮನಾಥ್ ನಾಯ್ಕ್, ಮನೋಜ್ ನಾಯ್ಕ್, ಉದಯ್ ನಾಯ್ಕ್, ರವೀಂದ್ರ ಕೇರಕರ್, ಕೃಷ್ಣಾನಂದ ನಾಯ್ಕ್, ಪುರುಷೋತ್ತಮ ನಾಯ್ಕ, ರಾಜು ವಡ್ಡರ್, ಶಶಿಕಾಂತ್ ನಾಯ್ಕ, ರಾಜೇಂದ್ರ ಅಂಚೆಕರ್, ಗುಂಡಪ್ಪ ಅವರು ಇದ್ದರು.
