ಗೋವಾದಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಕಾರು ಕಾರವಾರದಲ್ಲಿ ಅಪಘಾತವಾಗಿದೆ. ಸುರಂಗ ಮಾರ್ಗದೊಳಗೆ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಸಾವನಪ್ಪಿದ್ದಾರೆ.
ಸದ್ಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಸುರಂಗ ಮಾರ್ಗಗಳಿವೆ. ಆ ಪೈಕಿ ಒಂದು ಸುರಂಗ ಮಾರ್ಗದ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಮಳೆಗಾಲದ ಅವಧಿಯಲ್ಲಿ ಸುರಂಗದೊಳಗೆ ಕಲ್ಲು-ಮಣ್ಣು ಸುರಿಯುವ ಆತಂಕದ ಹಿನ್ನಲೆ ಒಂದು ಮಾರ್ಗದ ಸಂಚಾರಕ್ಕೆ ತಡೆ ಒಡ್ಡಿದ್ದು, ಎರಡು ಮಾರ್ಗದ ವಾಹನಗಳು ಇದೀಗ ಒಂದೇ ಮಾರ್ಗದಲ್ಲಿ ಸಂಚರಿಸುತ್ತಿವೆ.
ಮAಗಳವಾರ ಬೆಳಗ್ಗೆ ಪುತ್ತೂರು ಮೂಲದ ರಂಜಿತ್ ವಿಶ್ವನಾಥ ನಾಯ್ಕ ಅವರು ಈ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಗೋವಾ ಕಡೆಯಿಂದ ಅಂಕೋಲಾ ಕಡೆಗೆ ಅವರು ತಮ್ಮ ಆಲ್ಟೋ ಕಾರು ಓಡಿಸುತ್ತಿದ್ದಾಗ ಎದುರಿಗಿದ್ದ ಇನ್ನೊಂದು ವಾಹನದವರು ಮುಂದಿದ್ದ ವಾಹನ ಹಿಂದಿಕ್ಕುವ ಪ್ರಯತ್ನ ಮಾಡಿದರು. ಆ ವೇಳೆ ರಂಜಿತ್ ನಾಯ್ಕ ಅವರ ಕಾರು ನಿಯಂತ್ರಣ ತಪ್ಪಿ ಸುರಂಗದ ಗೋಡೆಗೆ ಬಡಿಯಿತು.
ಅಪಘಾತದ ರಭಸಕ್ಕೆ ರಂಜಿತ್ ಅವರು ಅಲ್ಲಿಯೇ ಸಾವನಪ್ಪಿದರು. ರಂಚಿತ್ ಅವರು ಪುತ್ತೂರಿನವರಾಗಿದ್ದು, ಊರಿಗೆ ಮರಳುವ ದಾವಂತದಲ್ಲಿ ವೇಗವಾಗಿ ಕಾರು ಓಡಿಸುತ್ತಿದ್ದರು. ಹೀಗಾಗಿ ಆ ಕಾರು ಏಕಾಏಕಿ ತಡೆಗೋಡೆಗೆ ಗುದ್ದಿದ್ದರಿಂದ ಅವರು ಸಾವನಪ್ಪಿದರು. ಈ ಅವಘಡದಲ್ಲಿ ಮತ್ತೊಂದು ಕಾರು ಸಹ ಜಖಂ ಆಗಿದೆ. ನಸುಕಿನ 3 ಗಂಟೆ ಅವಧಿಯಲ್ಲಿ ಈ ಅಪಘಾತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
