ಅತಿವೃಷ್ಠಿ, ಭೂ ಕುಸಿತ, ಫಸಲು ನಷ್ಟ ಸೇರಿ ರೈತರು ಅನುಭವಿಸುತ್ತಿರುವ ನಾನಾ ಸಮಸ್ಯೆಗಳ ನಡುವೆಯೂ ರೈತರಿಂದಲೇ ನಡೆಸಲ್ಪಡುವ ಯಲ್ಲಾಪುರದ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘ ಸಂಕಷ್ಟದ ನಡುವೆಯೂ ಸಾಧನೆ ಮಾಡಿದೆ. 2023-24ನೇ ಸಾಲಿನಲ್ಲಿ ಸೊಸೈಟಿ 50.39 ಲಕ್ಷ ರೂ ಲಾಭ ಮಾಡಿದೆ. ಜೊತೆಗೆ ಜೊಯಿಡಾ ಭಾಗಕ್ಕೂ ಸೊಸೈಟಿಯ ಕಾರ್ಯ ಯೋಜನೆ ವಿಸ್ತರಿಸಲು ಸಂಘ ನಿರ್ಧರಿಸಿದೆ.
ಈ ಸೊಸೈಟಿಗೆ ಕಳಚೆ ಮುಖ್ಯ ಶಾಖೆ. ಅದನ್ನುಹೊರತುಪಡಿಸಿ ಯಲ್ಲಾಪುರದಲ್ಲಿಯೂ ಸೊಸೈಟಿಯ ಶಾಖೆಯಿದ್ದು, 2025 ಸದಸ್ಯರು ಇಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಸೊಸೈಟಿಯ ಶೇರು ಬಂಡವಾಳ 2.04 ಕೋಟಿ ರೂ, ಕಾಯ್ದಿಟ್ಟ ನಿಧಿ 1.72 ಕೋಟಿ ರೂ, ಠೇವು 64.97 ಕೋಟಿ ರೂ, ದುಡಿಯುವ ಬಂಡವಾಳ 73.41 ಕೋಟಿ ರೂಪಾಯಿಗಳಾಗಿವೆ. 64.97 ಕೋಟಿ ರೂ ಠೇವಣಿಯಿದ್ದು, 63.68ಕೋಟಿ ರೂ ಸಾಲವೂ ಬಾಕಿಯಿದೆ. 2023-24ನೇ ಸಾಲಿನಲ್ಲಿ ಸೊಸೈಟಿಯ ಸಾಲ ವಸೂಲಾತಿ ಪ್ರಮಾಣ ಶೇ 89.67ರಷ್ಟಾಗಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಮಾಹಿತಿ ನೀಡಿದರು. `ಕಳೆದ ನಾಲ್ಕು ವರ್ಷಗಳಿಂದ ಎಪಿಎಂಸಿಯ ಶಾಖೆಯಲ್ಲಿ ಅಡಿಕೆ, ಕಾಳುಮೆಣಸು ವ್ಯಾಪಾರ ಪ್ರಾರಂಭಿಸಲಾಗಿದೆ. ಅದರ ಪರಿಣಾಮ ಕಳೆದ ವರ್ಷಕ್ಕಿಂತ ಈ ವರ್ಷ 10 ಲಕ್ಷ ರೂ ಹೆಚ್ಚು ಲಾಭವಾಗಿದೆ’ ಎಂದವರು ವಿವರಿಸಿದರು.
`ಮುಂಡಗೋಡ ಭಾಗದ ಅಡಿಕೆ ಬೆಳೆಗಾರರಿಗೆ ಸಂಘದಿoದ ಅರಿವು ಮೂಡಿಸಲಾಗುತ್ತಿದ್ದು, ಅಲ್ಲಿನ ಅಡಿಕೆ ಬೆಳೆಯನ್ನು ಇಲ್ಲಿ ವಿಕ್ರಿ ಮಾಡುವ ಬಗ್ಗೆ ಮನವರಿಕೆ ಮಾಡಲಾಗಿದೆ. ಸದ್ಯ ಯಲ್ಲಾಪುರ, ಮುಂಡಗೋಡ, ಜೊಯಿಡಾ, ಅಂಕೋಲಾ ತಾಲೂಕುಗಳ ಸುಮಾರು 20ಕ್ಕೂ ಹೆಚ್ಚು ಸಹಕಾರಿ ಸಂಘಗಳು ನಮ್ಮಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಜೊಯಿಡಾದಲ್ಲಿ ಅಡಿಕೆ ವ್ಯಾಪಾರಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ’ ಎಂದವರು ತಿಳಿಸಿದರು.
ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಭಟ್ಟ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಗಜಾನನ ಭಟ್, ರಾಘವೇಂದ್ರ ಸೂತ್ರೆಮನೆ, ಶ್ರೀನಾಥ ಹೆಗಡೆ, ಪ್ರೇಮಾ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕರಾದ ಪರಶುರಾಮ ಮರಾಠೆ, ಅನಂತ ಹೆಗಡೆ ಇತರರು ಇದ್ದರು.
