ಕಾರವಾರದ ಕೃಷಿಕರೊಬ್ಬರು ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರವಾರದ ಪಾಗಾ ಬಾಸುಣಗಾ ಬಳಿ ರಾಜು ಕುಡತರಕರ (45) ಅವರು ವಾಸವಾಗಿದ್ದರು. ಅವರು ಉಳಗಾದ ಶನಗುಡ್ಡಾ ಬಳಿ ತಮ್ಮ ಜಮೀನು ಹೊಂದಿದ್ದರು. ಮದ್ಯ ಸೇವನೆಯ ಚಟಕ್ಕೆ ಒಳಗಾಗಿದ್ದ ರಾಜು ಕುಡತರಕರ್ ಅವರು ಸೆ 1ರ ಸಂಜೆ ಮನೆಯಿಂದ ಹೊರ ಹೋಗಿದ್ದರು. ಸೆ 2ರಂದು ಅವರ ಜಮೀನಿನ ಕಾಲುವೆಯಲ್ಲಿ ಶವವಾಗಿ ಕಾಣಿಸಿಕೊಂಡರು.
ಉಳಗಾ-ಶನಗುಡ್ಡಾ ರಸ್ತೆಯ ಜಮೀನಿನಲ್ಲಿ ಹಾದು ಹೋದ ಕಾಲುವೆಯಲ್ಲಿ ರಾಜು ಕುಡತರಕರ ಅವರ ಶವ ಸಿಕ್ಕಿದ್ದು, ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನಪ್ಪಿದ ಬಗ್ಗೆ ಶಂಕಿಸಲಾಗಿದೆ. ನೀರಿನಿಂದ ಮೇಲೆ ಏಳಲು ಆಗದೇ ಅವರು ಸಾವನಪ್ಪಿರುವ ಬಗ್ಗೆ ರಾಜು ಅವರ ತಂದೆ ಸುರೇಶ ಕುಡತರಕರ ಅವರು ಕದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
