ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಭೂಮಿ ದಾಖಲೆಗಾಗಿ ಕಾಯುತ್ತಿರುವ ಲಕ್ಷಾಂತರ ಜನರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ನ್ಯಾಯಯುತ ಬೇಡಿಕೆಗಾಗಿ ಹೋರಾಡುತ್ತಿರುವವರಿಗೆ ಮತ್ತೆ ಅನ್ಯಾಯವಾಗುವ ಸಾಧ್ಯತೆ ಹೆಚ್ಚಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರ ಸಂಖ್ಯೆಯ ಜನ ಅರಣ್ಯ ಭೂಮಿ ಮಂಜೂರಿಗಾಗಿ ಕಾಯುತ್ತಿದ್ದಾರೆ. ಅನೇಕ ಬಾರಿ ಅವರು ಸಲ್ಲಿಸಿದ ಅರ್ಜಿ ತಿರಸ್ಕಾರವಾಗಿದ್ದು, ತಿರಸ್ಕಾರವಾದ ಅರ್ಜಿಗಳ ಮರುಪರಿಶೀಲನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ ಆದೇಶ ನೀಡಿದೆ. ಆದರೆ, ತಿರಸ್ಕೃತ ಅರ್ಜಿಗಳ ಮರುಪರಿಶೀಲನೆ ನಡೆಸದೇ ಹಳೆಯ ಕಡತವನ್ನೇ ಮತ್ತೆ ಕೇಂದ್ರಕ್ಕೆ ಸಲ್ಲಿಸುವ ಸಿದ್ಧತೆ ನಡೆದಿದೆ. ಈ ಹಿನ್ನಲೆ ಭೂಮಿ ಹಕ್ಕಿಗಾಗಿ ಕಾಯುತ್ತಿದ್ದವರು ತಮ್ಮ ಜೀವನದ ಉದ್ದಕ್ಕೂ ಕಾಯಬೇಕಾದ ಆತಂಕ ಎದುರಾಗಿದೆ.
`ಸವೋಚ್ಚ ನ್ಯಾಯಾಲಯದ ಆದೇಶದಂತೆ ತಿರಸ್ಕರಿಸಲ್ಪಟ್ಟ ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಜರುಗಿಸದಿರುವುದು ನ್ಯಾಯಾಂಗ ನಿಂದನೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಈ ಹಿಂದೆ ತಿರಸ್ಕರಿಸಲ್ಪಟ್ಟ ಅಂಕಿ – ಅಂಶದ ಆಧಾರದ ಮೇಲೆ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿಲ್ಲ. ಸುಪ್ರೀಂ ಕೊರ್ಟ ನಿರ್ದೇಶನ ಉಲ್ಲಂಘಿಸಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ 73,206 ಅರ್ಜಿ ತಿರಸ್ಕರಿಸಿ ವರದಿ ಸಲ್ಲಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ.

ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಯೂ ಕೇಂದ್ರ ಸರ್ಕಾರಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ವರದಿ ಪರಿಶೀಲಿಸಿದ ಅವರು ಕಾನೂನು ವಿಧಿ ವಿಧಾನ ಅನುಸರಿಸದಿರುವ ಅಂಶಗಳ ಬಗ್ಗೆ ಗಮನಸೆಳೆದರು. ಯಾವುದೇ ಮಾನದಂಡ ಅನುಸರಿಸದೇ ಈ ಹಿಂದೆ ತಿರಸ್ಕರಿಸಲ್ಪಟ್ಟ ಅಂಕೆ ಅಂಶದ ಆಧಾರದ ಮೇಲೆ ವರದಿ ಸಲ್ಲಿಕೆ ಆಗಿರುವುದನ್ನು ವಿಷಾಧಿಸಿದರು. `ಕೇಂದ್ರ ಸರ್ಕಾರವು ತಿರಸ್ಕರಿಸಲ್ಪಟ್ಟ ಅರ್ಜಿಯನ್ನ ತಿರಸ್ಕರಿಸಲ್ಪಟ್ಟ ಸಮಿತಿಯಿಂದಲೇ ಪುನರ್ ಪರಿಶೀಲಿಸಬೇಕು’ ಎಂಬ ಮಾರ್ಗಸೂಚಿ ಉಲ್ಲಂಗನೆಯಾಗಿರುವುದನ್ನು ಅವರು ವಿವರಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 88,453 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 2867 ಅರ್ಜಿದಾರರಿಗೆ ಮಾತ್ರ ಸಾಗುವಳಿ ಪತ್ರ ಸಿಕ್ಕಿದೆ. 73,206 ಅಂದರೇ, ಶೇ 82.76 ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. 12,380 ಅರ್ಜಿಗಳು ಮಾತ್ರ ವಿಚಾರಣೆ ಹಂತದಲ್ಲಿದೆ’ ಎಂದು ಸರ್ಕಾರ ಹೇಳಿರುವ ಅಂಕಿ-ಅAಶಗಳನ್ನು ಬಹಿರಂಗಪಡಿಸಿದರು.
