ಶಿರಸಿಯ ಸ್ನೇಹಾ ಅವರ ಆತ್ಮಹತ್ಯೆಯ ಕಾರಣ ಬಹಿರಂಗವಾಗಿದೆ. ಈ ಬಗ್ಗೆ ಅವರ ತಂದೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಶಿರಸಿಯ ಇಳಸೂರಿನ ಸ್ನೇಹಾ ಮದಗಲ್ (16) ಅವರು ಸೆಪ್ಟೆಂಬರ್ 1ರ ರಾತ್ರಿ 11 ಗಂಟೆ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸೆಪ್ಟೆಂಬರ್ 2ರ ಬೆಳಗ್ಗೆ ಅವರ ಶವ ಬನವಾಸಿ ಬಳಿಯ ಧರ್ಮಾ ಕೆರೆಯಲ್ಲಿ ಪತ್ತೆಯಾಗಿತ್ತು. ಸ್ನೇಹಾ ಅವರ ತಂದೆ ಶಿವಾನಂದ ಮುದಗಲ್ ಅವರು ಪೊಲೀಸ್ ಅಧಿಕಾರಿಯಾಗಿದ್ದು, ಮಗಳ ಸಾವಿನ ನೋವಿನಲ್ಲಿದ್ದರು. ಸ್ನೇಹಾ ಅವರ ಸಾವಿನಿಂದ ಅವರ ಕುಟುಂಬದವರ ಜೊತೆ ಆಪ್ತರು ಆಘಾತಕ್ಕೆ ಒಳಗಾಗಿದ್ದರು.
ಸ್ನೇಹಾ ಮುದಗಲ್ ಅವರ ಸಾವಿನ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಅವರು ಸಾವಿಗೂ ಮುನ್ನ ಮರಣ ಪತ್ರ ಬರೆದಿರುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡಿದ್ದವು. ಆ ಮರಣ ಪತ್ರದಲ್ಲಿ ಏನಿದೆ? ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಎಲ್ಲಾ ವಿಷಯಗಳಿಗೆ ಇದೀಗ ಸ್ನೇಹಾ ಅವರ ತಂದೆ ಶಿವಾನಂದ ಮುದಗಲ್ ಅವರು ತೆರೆ ಎಳೆದಿದ್ದಾರೆ.
ಸ್ನೇಹಾ ಮದಗಲ್ (16) ಅವರು ಬಾಲ್ಯದಿಂದಲೂ ಚುರುಕಾಗಿದ್ದದ್ದರು. ಹೀಗಾಗಿಯೇ ಮುಂಡಗೋಡಿನ ಮಳಗಿಯಲ್ಲಿರುವ ನವೋದಯ ಶಾಲೆಯಲ್ಲಿ ಅವರಿಗೆ ಪ್ರವೇಶ ಸಿಕ್ಕಿತ್ತು. 6ರಿಂದ 10ನೇ ತರಗತಿಯವರೆಗೂ ನವೋದಯಲ್ಲಿ ಅವರು ವಿದ್ಯಾಬ್ಯಾಸ ಮಾಡಿದ್ದರು. ಅದಾದ ನಂತರ ಸ್ನೇಹಾ ಮದಗಲ್ ಅವರನ್ನು ಪಾಲಕರು ಶಿರಸಿಯ ಚಂದನಾ ಕಾಲೇಜಿಗೆ ಸೇರಿಸಿದ್ದರು. ಆ ಕಾಲೇಜಿಗೆ ಹೋಗಲು ಸ್ನೇಹಾ ಅವರಿಗೆ ಇಷ್ಟವಿರಲಿಲ್ಲ. ಅದಾಗಿಯೂ ಅಲ್ಲಿ ಪಿಯುಸಿ ಪ್ರವೇಶಪಡೆದ ಸ್ನೇಹಾ ಅವರು ವಿಜ್ಞಾನ ವಿಷಯ ಆರಿಸಿಕೊಂಡಿದ್ದು, ಆ ವಿಷಯವನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ.
ಇದೇ ಕಾರಣದಿಂದ ಬೇಸರದಲ್ಲಿದ್ದ ಸ್ನೇಹಾ ಮದಗಲ್ ಅವರು ಆತ್ಮಹತ್ಯೆಗೆ ಶರಣಾದರು. ಈ ವಿಷಯವನ್ನು ಸ್ನೇಹಾ ಅವರ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
