ತೆಂಗಿನ ಮರದಲ್ಲಿದ್ದ ಕಾಯಿ ಕೀಳುವ ವಿಷಯವಾಗಿ ಸಿದ್ದಾಪುರದ ಶ್ಯಾಮಲಾ ಮಡಿವಾಳ ಹಾಗೂ ಸೊರಬದ ಜಯಲಕ್ಷ್ಮಿ ಮಡಿವಾಳ ನಡುವೆ ಜಗಳವಾಗಿದೆ. ಈ ಜಗಳ ಹೊಡೆದಾಟದ ಸ್ವರೂಪಪಡೆದಿದ್ದು, ಜಯಲಕ್ಷ್ಮಿ ಮಡಿವಾಳ ಅವರು ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಶ್ಯಾಮಲಾ ಮಡಿವಾಳ ಅವರ ಕೆನ್ನೆಗೆ ಬಾರಿಸಿದ್ದಾರೆ.
ಸಿದ್ದಾಪುರದ ಕೋಡ್ಸರ ಕುಚಕುಂಡಿಯಲ್ಲಿ ಶ್ಯಾಮಲಾ ಮಡಿವಾಳ ಅವರು ಪತಿ ದೇವರಾಜ ಮಡಿವಾಳ ಅವರ ಜೊತೆ ವಾಸವಾಗಿದ್ದಾರೆ. ದೇವರಾಜ ಮಡಿವಾಳ ಹಾಗೂ ಅವರ ತಂಗಿ ಜಯಲಕ್ಷ್ಮಿ ಮಡಿವಾಳರ ನಡುವೆ ಮೊದಲಿನಿಂದಲೂ ಆಸ್ತಿಗಾಗಿ ಹೋರಾಟ ನಡೆಯುತ್ತಿದೆ. ಇದೇ ವಿಷಯವಾಗಿ ಈ ಎರಡು ಕುಟುಂಬಗಳ ನಡುವೆ ಆಗಾಗ ಜಗಳವಾಗುತ್ತಿದ್ದು, ಅದೂ ಇದೀಗ ಹೊಡೆದಾಟಕ್ಕೆ ತಿರುಗಿದೆ.
ಸೆಪ್ಟೆಂಬರ್ 2ರಂದು ಶ್ಯಾಮಲಾ ಮಡಿವಾಳ ಅವರು ಬೆಟ್ಟಕ್ಕೆ ತೆರಳಿ ಹುಲ್ಲು ಕೊಯ್ಯುತ್ತಿದ್ದರು. ಆಗ, ಅಲ್ಲಿನ ತೆಂಗಿನ ಮರದ ಕಾಯಿ ಕೊಯ್ಯಲು ವ್ಯಕ್ತಿಯೊಬ್ಬರು ಬಂದರು. ಕಾಯಿ ಕೊಯ್ಯುವ ತಯಾರಿ ನಡೆಸಿದಾಗ ಸೊರಬದ ನರ್ಚಿಯಲ್ಲಿರುವ ಜಜಯಲಕ್ಷ್ಮಿ ಮಡಿವಾಳ ಅವರ ಜೊತೆ ದೇವರಾಜ ಮಡಿವಾಳ ಅವರ ಅಕ್ಕನ ಮಕ್ಕಳಾದ ಯಶ್ವಂತ ಮಡಿವಾಳ ಹಾಗೂ ಮಹೇಶ ಮಡಿವಾಳ ಅದನ್ನು ತಡೆದರು.
`ಈ ಮರದಲ್ಲಿ ನಮಗೂ ಹಕ್ಕಿದೆ. ನೀವೊಬ್ಬರೇ ಕಾಯಿ ಕೊಯ್ಯಲು ಬರುವುದಿಲ್ಲ’ ಎಂದು ಜಯಲಕ್ಷ್ಮಿ ಮಡಿವಾಳ ಅವರು ಜಗಳ ಶುರು ಮಾಡಿದರು. `ಈ ಮರ ನೀ ನೆಟ್ಟಿದ್ದು ಅಲ್ಲ’ ಎಂದು ವಾದ ಮಾಡಿದರು. ಆಗ, ಆ ಇಬ್ಬರು ಮಹಿಳೆಯರ ನಡುವೆ ಜಗಳ ಶುರುವಾಗಿದ್ದು, ಶ್ಯಾಮಲಾ ಮಡಿವಾಳ ಅವರಿಗೆ ಜಯಲಕ್ಷ್ಮಿ ಮಡಿವಾಳ ಅವರು ಚಪ್ಪಲಿಯಿಂದ ಕೆನ್ನೆಗೆ ಬಾರಿಸಿದರು.
ಜೊತೆಗಿದ್ದ ಯಶ್ವಂತ ಮಡಿವಾಳ ಹಾಗೂ ಮಹೇಶ ಮಡಿವಾಳ ಸಹ ಶ್ಯಾಮಲಾ ಮಡಿವಾಳ ಅವರನ್ನು ಹಿಡಿದು ಥಳಿಸಿದರು. ತಮಗಾದ ಅವಮಾನ ಹಾಗೂ ಹಲ್ಲೆಯ ಬಗ್ಗೆ ಶ್ಯಾಮಲಾ ಮಡಿವಾಳ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದರು.
