ಶಿರಸಿಯ ಮಹಾವೀರ ಹುಣಸೆಮರದ್ ಅವರಿಗೆ ಓಮಿನಿ ಗುದ್ದಿದ ಪ್ರಸನ್ನ ನಾಯ್ಕ ಅವರು ಈ ಬಗ್ಗೆ ಪ್ರಶ್ನಿಸಿದಾಗ ಗುಂಪು ಕಟ್ಟಿಕೊಂಡು ಬಂದು ಬಡಿಗೆ-ರಾಡಿನಿಂದ ಹೊಡೆದಿದ್ದಾರೆ. ಈ ಹೊಡೆದಾಟ ತಪ್ಪಿಸಲು ಮುಂದಾದ ಮಹಾವೀರ ಹುಣಸೆಮರದ್ ಅವರ ಆಪ್ತರು ಎದುರಾಳಿಗಳಿಂದ ಬೈಸಿಕೊಂಡಿದ್ದಾರೆ.
ಬನವಾಸಿಯ ಕೊರ್ಲಕಟ್ಟಾ ಬಳಿ ಮಹಾವೀರ ಹುಣಸೆಮರದ್ ಅವರು ವಾಸವಾಗಿದ್ದು, ಅಗಸ್ಟ 2ರ ರಾತ್ರಿ ಅವರು ಸುಗ್ಗಾವಿ-ಕೋರ್ಲಕಟ್ಟಾ ರಸ್ತೆಯಲ್ಲಿರುವ ಸತೀಶ ಅವರ ಮನೆಗೆ ಹೋಗಿದ್ದರು. ರಾತ್ರಿ 10.30ಕ್ಕೆ ಅಲ್ಲಿಂದ ಮರಳುವಾಗ ಕೋರ್ಲಕಟ್ಟಾದ ಪ್ರಸನ್ನ ನಾಯ್ಕ ಅವರು ವೇಗವಾಗಿ ಓಮಿನಿ ಓಡಿಸಿಕೊಂಡು ಬರುತ್ತಿರುವುದನ್ನು ನೋಡಿದರು. ಆ ಓಮಿನಿ ಮಹಾವೀರ ಹುಣಸೆಮರದ್ ಅವರಿಗೆ ಡಿಕ್ಕಿಯಾಯಿತು.
ಈ ವೇಳೆ `ಕಿರಿದಾದ ರಸ್ತೆಯಲ್ಲಿ ನಿಧಾನವಾಗಿ ಗಾಡಿ ಓಡಿಸಲು ಆಗುವುದಿಲ್ಲವಾ?’ ಎಂದು ಮಹಾವೀರ ಹುಣಸೆಮರದ್ ಅವರು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಪ್ರಸನ್ನ ನಾಯ್ಕ ಅವರು ಓಮಿನಿಯಿಂದ ಕೆಳಗಿಳಿದು ಜಗಳ ಶುರು ಮಾಡಿದರು. ಆ ಜಗಳ ದೊಡ್ಡದಾದಾಗ ಪ್ರಸನ್ನ ನಾಯ್ಕ ಅವರು ಮಹಾವೀರ ಅವರ ಕುತ್ತಿಗೆ ಹಿಡಿದು ದೂಡಿದರು. ಮಹಾವೀರ ಅವರು ನೆಲಕ್ಕೆ ಬಿದ್ದಾಗ ಅದೇ ಊರಿನ ಗಣಪತಿ ನಾಯ್ಕ, ಸುಬ್ರಹ್ಮಣ್ಯ ನಾಯ್ಕ ಜೊತೆ ಶಿರಸಿ ಟಿಎಸ್ಎಸ್ ಪೆಟ್ರೋಲ್ ಬಂಕ್ ಬಳಿಯ ರಾಘವೇಂದ್ರ ಪೂಜಾರಿ ಸಹ ಓಮಿನಿಯಿಂದ ಇಳಿದರು. ಅವರೆಲ್ಲರೂ ಸೇರಿ ಮಹಾವೀರ ಅವರನ್ನು ಕಾಲಿನಿಂದ ಒದ್ದರು.
ಈ ವೇಳೆ ಪ್ರಸನ್ನ ನಾಯ್ಕ ಅವರು ಕಾರಿನಲ್ಲಿದ್ದ ಕಬ್ಬಿಣದ ರಾಡು ತಂದು ಮಹಾವೀರ ಅವರಿಗೆ ಹೊಡೆದರು. ಉಳಿದವರು ಸಹ ಕೈ ಹಾಗೂ ಬಡಿಗೆಯಿಂದ ಥಳಿಸಿದರು. ಆಗ ಅದೇ ಊರಿನ ಸತೀಶ, ನವೀನ, ಪ್ರಮೋದ ಹೊಡೆದಾಟ ತಪ್ಪಿಸಿದರು. ಪ್ರಸನ್ನ ನಾಯ್ಕ ಅವರ ಜೊತೆ ಗಣಪತಿ ನಾಯ್ಕ, ಸುಬ್ರಹ್ಮಣ್ಯ ನಾಯ್ಕ ಹಾಗೂ ರಾಘವೇಂದ್ರ ಪೂಜಾರಿ ಸೇರಿ ಹೊಡೆದಾಟ ತಪ್ಪಿಸಿದವರಿಗೂ ನಿಂದಿಸಿದರು. ಈ ಎಲ್ಲಾ ವಿಷಯದ ಬಗ್ಗೆ ಮಹಾವೀರ ಹುಣಸೆಮರದ್ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
