ಈಚೆಗೆ ಬೆಂಗಳೂರಿನ ವಕೀಲೆಯೊಬ್ಬರಿಗೆ ಅನಾಮಿಕ ವ್ಯಕ್ತಿಯ ಫೋನ್ ಬಂದಿತು. `ನಿಮ್ಮ ಹೆಸರಿನಲ್ಲಿ ಡ್ರಗ್ಸ ಸಾಗಾಟ ನಡೆದಿದೆ. ನಾವು ಅದನ್ನು ತನಿಖೆ ಮಾಡಬೇಕಿದೆ’ ಎಂದು ಫೋನ್ ಮಾಡದವರು ಬೆದರಿಸಿದ್ದರು. ಮುಂಬೈ ಸೈಬರ್ ಕ್ರೈಂ ತಂಡ ಎಂದು ಹೇಳಿಕೊಂಡ ದುಷ್ಕಮಿಗಳು ಎರಡು ದಿನಗಳ ಕಾಲ ವಕೀಲರು ಕ್ಯಾಮರಾ ಮುಂದೆ ಇರುವಂತೆ ಮಾಡಿದರು. ಡಿಜಿಟಲ್ ಅರೆಸ್ಟ್ ಮೂಲಕ ಅವರನ್ನು ಅವರದ್ದೇ ಮನೆಯಲ್ಲಿ ಕೂಡಿಹಾಕಿ ಚಲನ-ವಲನವನ್ನು ಗಮನಿಸುತ್ತಿದ್ದರು!
ಮೊದಲು ಫೆಡ್ಎಕ್ಸ್ ಕಾರ್ಗೋ ಕಂಪನಿಯ ಹೆಸರು ಹೇಳಿಕೊಂಡು ಮಾತನಾಡಿದ ಸೈಬರ್ ಕ್ರಿಮಿಗಳು `ನಿಮ್ಮ ಹೆಸರಿನಲ್ಲಿ ಮುಂಬಯಿಯಿoದ ಥಾಯ್ಲೆಂಡ್ಗೆ ಪಾರ್ಸೆಲ್ ಕಳುಹಿಸಲಾಗಿದ್ದು, ಅದರಲ್ಲಿ ಐದು ಪಾಸ್ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್ಗಳು ಹಾಗೂ ನಿಷೇಧಿತ ಮಾದಕವಸ್ತು ಎಂಡಿಎoಎ ಮಾತ್ರೆಗಳಿವೆ’ ಎಂದು ತಿಳಿಸಿದ್ದರು. `ಆ ಪಾರ್ಸೆಲ್ಗೂ ತಮಗೂ ಯಾವುದೇ ಸಂಬoಧ ಇಲ್ಲ’ ಎಂದು ವಕೀಲೆ ಪ್ರತಿಕ್ರಿಯೆ ನೀಡಿದರೂ ಕೂಡ ನಾನಾ ವಿಧದ ಬಣ್ಣದ ಮಾತುಗಳಿಂದ ನಂಬಿಸಿ, ಆಧಾರ್, ಬ್ಯಾಂಕ್ ಅಕೌಂಟ್ ಹೀಗೆ ನಾನಾ ವಿಧದ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಅವರ ಆಧಾರ್ ಕಾರ್ಡ್ನ್ನು ಮಾನವ ಕಳ್ಳಸಾಗಣೆ ಹಾಗೂ ಡ್ರಗ್ಸ್ ಸಾಗಣೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಹೈ ಅಲರ್ಟ್ ನೀಡಿದರು. ಇಡೀ ಪ್ರಕ್ರಿಯೆಯುದ್ದಕ್ಕೂ ಆಕೆ ಕರೆಯನ್ನು ಕಟ್ ಮಾಡುವಂತೆ ಇರಲಿಲ್ಲ. ಆಕೆಯ ಫೋನ್ ಸ್ಕ್ರೀನ್ ಆತನಿಗೆ ಕಾಣುವಂತೆ ಇರಬೇಕಿತ್ತು. ಪರೀಕ್ಷೆಯ ಹೆಸರಿನಲ್ಲಿ ಆಕೆಯನ್ನು ಸ್ಕೆಪ್ ಕಾಲ್ನಲ್ಲಿ ಬೆತ್ತಲಾಗಿಸಿ ಬ್ಲ್ಯಾಕ್ಮೇಲ್ ಮಾಡಿ, 14 ಲಕ್ಷ ರೂ ದೋಚಿದ್ದರು. ವೃತ್ತಿಯಲ್ಲಿ ವಕೀಲೆಯಾಗಿದ್ದರೂ ಡಿಜಿಟಲ್ ಅರೆಸ್ಟ್ ಅವಧಿಯಲ್ಲಿ ತಮ್ಮ ಪರವಾಗಿ ವಾದ ಮಾಡಲು ಆ ಮಹಿಳೆ ಸೋತರು!
ಅದೇ ರೀತಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೆಲ ದಿನಗಳ ಹಿಂದೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, `ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್ ಅನ್ನು ದಿಲ್ಲಿಯಲ್ಲಿ ಜಪ್ತಿ ಮಾಡಲಾಗಿದೆ. ಅದರಲ್ಲಿ ನಿಮ್ಮ ಪಾಸ್ಪೋರ್ಟ್, ಎಟಿಎಂ ಕಾರ್ಡ್ಗಳು ಮತ್ತು ಎಂಡಿಎoಎ ಮಾದಕ ವಸ್ತುವಿದೆ’ ಎಂದಿದ್ದರು. `ಪಾರ್ಸೆಲ್ನಲ್ಲಿ ಮಾದಕ ವಸ್ತು ಇರುವುದು ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ಗೊತ್ತಾಗಿದೆ. ಆ ಪಾರ್ಸೆಲ್ ನಿಮಗೆ ಸೇರಿರದಿದ್ದರೆ ದೂರು ಕೊಡಬಹುದು. ದೂರು ದಾಖಲಿಸಲು ಸ್ಕೆಪ್ ಡೌನ್ಲೋಡ್ ಮಾಡಿಕೊಳ್ಳಿ’ ಎಂದು ವಂಚಕರು ಸೂಚಿಸಿದ್ದದರು. ನಂತರ ಹಂತಹoತವಾಗಿ ಬೆದರಿಸಿದ ನಕಲಿ ಅಧಿಕಾರಿಗಳ ತಂಡದವರು ತಮ್ಮ 8 ಬ್ಯಾಂಕ್ ಖಾತೆಗಳಿಗೆ ಬೆಂಗಳೂರಿನ ವ್ಯಕ್ತಿ ಮೂಲಕ 2.42 ಕೋಟಿ ರೂ ವರ್ಗಾವಣೆ ಮಾಡಿಸಿಕೊಂಡಿದ್ದರು!
ದಿನದಿoದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಎರಡು ಘಟನೆ ಡಿಜಿಟಲ್ ಅರೆಸ್ಟಿನ ಉದಾಹರಣೆ ಮಾತ್ರ. ಇಂಥ ನೂರಾರು ಘಟನೆ ನಡೆಯುತ್ತಲೇ ಇದ್ದು, ಡಿಜಿಟಲ್ ಸಾಕ್ಷರತೆ ಮಾತ್ರ ಇದಕ್ಕೆ ಪರಿಹಾರ. ಸೈಬರ್ ಬುಲ್ಲಿಂಗ್, ಸೈಬರ್ ಫಿಶಿಂಗ್, ಸೈಬರ್ ಗ್ರೂಮಿಂಗ್ ಇತ್ಯಾದಿ ಇತ್ಯಾದಿ…ಇದೀಗ, ಅಷ್ಟೇ ವೇಗವಾಗಿ ಮತ್ತು ಇನ್ನೂ ಗಂಭೀರವಾಗಿ ವ್ಯಾಪಿಸುತ್ತಿರುವ ಇನ್ನೊಂದು ವಿಧ `ಡಿಜಿಟಲ್ ಅರೆಸ್ಟ್’. ಇದರ ಗಂಭೀರತೆ ಇತ್ತೀಚೆಗಷ್ಟೇ ಅರ್ಥವಾಗತೊಡಗಿದೆ. ಈ ವಿಧದಲ್ಲಿ, ಸೈಬರ್ ಕ್ರಿಮಿಗಳು ಪೊಲೀಸ್, ಕಸ್ಟಮ್ಸ್, ಐಟಿ ಅಧಿಕಾರಿಗಳೆಂದು ನಂಬಿಸಿ ಲಕ್ಷ ಬಿಡಿ, ಕೋಟಿಯ ಲೆಕ್ಕದಲ್ಲಿ ಹಣ ದೋಚುತ್ತಿದ್ದಾರೆ.
ಭಾರತದಾದ್ಯಂತ ಇದೇ ರೀತಿಯ `ಡಿಜಿಟಲ್ ಅರೆಸ್ಟ್’ ಘಟನೆಗಳು ಹೆಚ್ಚತೊಡಗಿವೆ. ಅಲ್ಲಿ ಸೈಬರ್ ಅಪರಾಧಿಗಳು ಬಲಿಪಶುಗಳನ್ನು ಹೆದರಿಸುತ್ತಾರೆ. ಬೆದರಿಕೆಯ ಭಾಷೆ ಬಳಸಿ ಭಯಭೀತರಾಗಿಸುತ್ತಾರೆ. ಪುರಾವೆಗಳನ್ನು ಸೃಷ್ಟಿಸುತ್ತಾರೆ ಮತ್ತು ಯಾವುದೇ ಕಾನೂನು ಪರಿಣಾಮಗಳಿಂದ ಅಥವಾ ಅರೆಸ್ಟ್ನಿಂದ ತಪ್ಪಿಸಿಕೊಳ್ಳಲು ದೊಡ್ಡ ಮೊತ್ತದ ಹಣವನ್ನು ಕೇಳುತ್ತಾರೆ. ಈ ಹಗರಣದಲ್ಲಿ ಪೋಲೀಸ್ ಅಥವಾ ಕಸ್ಟಮ್ಸ್ ಏಜೆಂಟ್ಗಳನ್ನು ಒಳಗೊಂಡoತೆ ಅನೇಕ ವಿಭಾಗದ ಅಧಿಕಾರಿಗಳಂತೆ ಸೈಬರ್ ಅಪರಾಧಿಗಳು ಸೋಗು ಹಾಕುತ್ತಾರೆ. ನೀವು ಡಿಜಿಟಲ್ ಬಂಧನಕ್ಕೆ ಒಳಪಡಿಸಿದ್ದೀರೆಂದು ಭಾವಿಸುವಂತೆ ನಂಬಿಸಿ ಮೋಸಗೊಳಿಸುತ್ತಾರೆ.
ನೆನಪಿಡಿ, ಭಾರತದಲ್ಲಿ ತನಿಖಾ ಅವಧಿಯಲ್ಲಿ ಯಾವುದೇ ಅಪರಾಧಕ್ಕಾಗಿ ವ್ಯಕ್ತಿಯನ್ನು ಡಿಜಿಟಲ್ ಬಂಧನ ಅಥವಾ ಲಾಕ್ ಮಾಡಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿ ಪ್ರತಿಯೊಂದು ಘಟನೆಯಲ್ಲಿ ನಡೆದಿರುವುದು `ಕಣ್ಕಟ್ಟು’! ಆಧಾರ್ ಕಾರ್ಡ್ನಂತಹ ದಾಖಲೆಗಳು ಬಳಕೆಯಾಗಿ ತಮ್ಮ ಮೇಲೆ ಆರೋಪ ಬಂದಿದ್ದರೂ, ತನಿಖಾಧಿಕಾರಿಗಳು ನೇರವಾಗಿ ಬಂದು ವಿಚಾರಣೆ ಮಾಡದೇ ಇದೇಕೆ ಫೋನಿನಲ್ಲಿ ಸಂಪರ್ಕಿಸಿ ತನಿಖೆ ನಡೆಸುತ್ತಿದ್ದಾರೆ ಎಂಬ ಅನುಮಾನವೂ ಬಾರದೆ ಇವರೆಲ್ಲಾ ಮೋಸಕ್ಕೊಳಗಾದರು ಎಂದರೆ, ತಪ್ಪು ಯಾರದ್ದು?! ಇಂತಹ ಸಂದರ್ಭ ಎದುರಾಗದಂತೆ ಅಥವಾ ಎದುರಾದಾಗ ಮತ್ತದೇ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಅಪರಿಚಿತ ಸಂಖ್ಯೆಗಳಿAದ ಬರುವ ಎಲ್ಲಾ ಕರೆ/ಸಂದೇಶಗಳು/ಆಫರ್ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಯಾವಾಗಲೂ ‘ಶೂನ್ಯ ವಿಶ್ವಾಸ, ತಾಳ್ಮೆ ಮತ್ತು ದೃಢೀಕರಣ’ ತತ್ವವೇ ಮದ್ದು. ನಿಮಗೆ ಏನಾದರೂ ಸಂದೇಹ ಬಂದರೆ, ಪ್ರಶ್ನೆ ಮಾಡಿ ಅಥವಾ ಸಮಯ ಪಡೆದು ಪ್ರತಿಕ್ರಿಯಿಸಿ. ಪ್ರತಿಕ್ರಿಯಿಸುವ ಮೊದಲು, ಬ್ಯಾಂಕ್, ಆಧಾರ್ ಇತ್ಯಾದಿ ವಿವರಗಳನ್ನು ನೀಡುವ ಮುನ್ನ ನೂರು ಬಾರಿ ಯೋಚಿಸಿ.
ಅಪರಿಚಿತರಿಂದ ಬರುವ ಹೈಪರ್ ಲಿಂಕ್ನ್ನು ಕ್ಲಿಕ್ ಮಾಡಬೇಡಿ ಅಥವಾ ಕ್ಯುಆರ್ ಕೋಡ್ ಅನ್ನು ಸ್ಕಾನ್ ಮಾಡಬೇಡಿ. ಆಧಾರ್ ಅಥವಾ ಪ್ಯಾನ್ ವಿವರಗಳು ಅಥವಾ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಅಪರಿಚಿತರಿಂದ ಬರುವ ಆನ್ಲೈನ್ ಹಣ ವರ್ಗಾವಣೆ ಬೇಡಿಕೆಗಳು, ತುರ್ತು ಕಾನೂನು ಕ್ರಮದ ಬೆದರಿಕೆಗಳ ಬಗ್ಗೆ ಪರಾಂಬರಿಸಿ. ಅವರು ಇಲ್ಲದೇ ಇರುವುದನ್ನು ಸಾಧಿಸಹೊರಟಾಗ, ನೀವು ಇರುವುದನ್ನು ಸಾಧಿಸಲೂ ಸಾಧ್ಯವಿದೆಯಲ್ಲ?! ಇವರಂತೆ ನೀವೂ ಬಲಿಪಶುಗಳಾಗಬೇಡಿ ಎಂಬುದೇ ನಮ್ಮ ಕಾಳಜಿ. ನೀವು ಎಚ್ಚರವಾಗಿರಿ, ನಿಮ್ಮವರಿಗೂ ಎಚ್ಚರಿಕೆ ಮೂಡಿಸಿ.
