ಅಂಕೋಲಾದ ಹಿಚಕಡ ಶಾಲೆಯ ಶಿಕ್ಷಕ ಶೇಖರ ಗಾಂವಕಾರ್ ಅವರ ವಿರುದ್ಧ ಕೇಳಿ ಬಂದ ಅನುಚಿತ ವರ್ತನೆ ಆರೋಪ ಸಾಭೀತಾಗಿಲ್ಲ. ಸಹಶಿಕ್ಷಕರು ಸಹ ಅನುಚಿತ ವರ್ತನೆಯ ಆರೋಪವನ್ನು ಅಲ್ಲಗಳೆದಿದ್ದು, ಶಾಲೆಯವರು ಸಹ ದೂರು ನೀಡಿಲ್ಲ. ಅದಾಗಿಯೂ ದಾಖಲೆಗಳ ಪ್ರಕಾರ ಶಾಲೆ ಹಾಗೂ ಶಿಕ್ಷಕರ ಹೆಸರು ಮುನ್ನಲೆಗೆ ಬಂದಿದ್ದು, ಇದಕ್ಕೆ ಕಾರಣ ಹುಡುಕಲಾಗುತ್ತಿದೆ.
ಹಿಚಕಡ ಶಾಲೆಯಲ್ಲಿ ಮೊದಲಿನಿಂದಲೂ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಸುಂದರ ಪರಿಸರದಲ್ಲಿ ಕಲಿತ ಮಕ್ಕಳು ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆಟ-ಓಟಗಳ ಜೊತೆ ಪಾಠದಲ್ಲಿಯೂ ಇಲ್ಲಿನ ಮಕ್ಕಳು ಪ್ರತಿಭಾನ್ವಿತರಾಗಿದ್ದು ಅದಕ್ಕೆ ಶಿಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಿರುವಾಗ ಇಲ್ಲಿನ ಶಿಕ್ಷಕ ಶೇಖರ ಗಾಂವಕಾರ್ ಅವರ ವಿರುದ್ಧ ಆರೋಪವೊಂದು ಕೇಳಿ ಬಂದಿದ್ದರಿoದ ಊರಿನವರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಸ್ಪಷ್ಟತೆ ಬೇಕು ಎಂದು ಆಗ್ರಹಿಸಿದ್ದರು. ಶಾಲೆಯನ್ನು ಬಂದ್ ಮಾಡಿ ಪ್ರತಿಭಟಿಸಿದ್ದರು. ಶಿಕ್ಷಕರ ವಿರುದ್ಧ ಕೇಳಿ ಬಂದ ಆರೋಪ ವಿಷಯವಾಗಿ ಶಾಲೆಯಲ್ಲಿ ಎರಡು ಬಾರಿ ಸಭೆ ನಡೆದಿದ್ದು, `ಯಾವುದೇ ಶಿಕ್ಷಕರಿಂದ ಯಾವುದೇ ಬಗೆಯ ಅನುಚಿತ ವರ್ತನೆ ನಡೆದಿಲ್ಲ’ ಎಂದು ಶಿಕ್ಷಕರು ಹೇಳಿದ್ದಾರೆ.
ಆ ದಿನ ನಡೆದಿದ್ದೇನು?
ಅಂಕೋಲಾದ ಹಿಚಕಡದ ಶಾಲೆಯಲ್ಲಿ ಅಹಿತಕರ ಘಟನೆಯೊಂದು ನಡೆದ ಬಗ್ಗೆ ವದಂತಿಯಿದ್ದು, ಆ ಬಗ್ಗೆ ಮಾಹಿತಿ ಕೋರಿ ಶಿಕ್ಷಣಾಧಿಕಾರಿಗಳಿಗೆ ವ್ಯಕ್ತಿಯೊಬ್ಬರು ಫೋನ್ ಮಾಡಿದ್ದರು. ಈ ಬಗ್ಗೆ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದರು. ಆಗ, ಶಾಲೆಯಲ್ಲಿ `ಅಂಥ ಯಾವುದೇ ಘಟನೆ ನಡೆದಿಲ್ಲ’ ಎಂದು ಮುಖ್ಯ ಶಿಕ್ಷಕರು ಬರೆದುಕೊಟ್ಟಿದ್ದರು. ಆ ವೇಳೆ ಶೇಖರ ಗಾಂವಕರ್ ಅವರ ಹೆಸರು ನಮೂದಾಗಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು.
ಇದರೊಂದಿಗೆ ವಿವಿಧ ಹಂತದಲ್ಲಿ ಗ್ರಾಮದವರ ಜೊತೆ ಇನ್ನಿತರು ಈ ಬಗ್ಗೆ ವಿಚಾರಣೆ ನಡೆಸಿದ್ದು, ಅಂಥ ಅಹಿತಕರ ಘಟನೆ ನಡೆದ ಬಗ್ಗೆ ಯಾವ ಕುರುಹು ಸಿಕ್ಕಿಲ್ಲ. ಮಕ್ಕಳು ಸಹ ತಮಗೆ ಅನ್ಯಾಯವಾಗಿದೆ ಎಂದು ಹೇಳಿಲ್ಲ. ಫೋನ್ ಮಾಡಿ ಪ್ರಶ್ನಿಸಿದ ವ್ಯಕ್ತಿ ಸಹ ದೂರುದಾರರಲ್ಲ. ಫೋನ್ ಮಾಡಿದವರು ಕೇಳಿದ ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದೇ ಅವಾಂತರಗಳಿಗೆ ಮೂಲ ಕಾರಣ ಎನ್ನಲಾಗುತ್ತಿದ್ದು, ಶಿಕ್ಷಕರೆಲ್ಲರೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಪಾಠ ಮಾಡಬೇಕು ಎಂದು ಅಲ್ಲಿದ್ದವರು ಧೈರ್ಯ ಹೇಳಿದರು.
ಶೇಖರ ಗಾಂವಕಾರ್ ಅವರು ಕಳೆದ ಒಂದು ದಶಕದಿಂದ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದು, ಆ ಶಿಕ್ಷಕರ ವಿರುದ್ಧ ಅನಗತ್ಯ ಆರೋಪ ಬಂದಿರುವುದಕ್ಕೆ ಶೇಖರ ಗಾಂವಕಾರ್ ಅವರನ್ನು ಹತ್ತಿರದಿಂದ ನೋಡಿದ ಶಿಕ್ಷಕರು ಬೇಸರವ್ಯಕ್ತಪಡಿಸಿದರು.
