ಶಿವಮೊಗ್ಗದಲ್ಲಿ ರಾಜ್ಯ ಗುತ್ತಿಗೆದಾರರ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಗುತ್ತಿಗೆದಾರರು ಇಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಸಮಸ್ಯೆ ಹೇಳಲು ಸಚಿವರ ಬಳಿ ಹೋದಾಗ ಸಚಿವರು ಗುತ್ತಿಗೆದಾರರನ್ನು ಅವಮಾನಿಸಿದನ್ನು ಸಹ ಈ ಸಭೆಯಲ್ಲಿ ಖಂಡಿಸಿದ್ದಾರೆ.
ಕರ್ನಾಟಕ ಸ್ಟೇಟ್ ಕಂಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಸಭೆಯಲ್ಲಿ ಕಾರವಾರದ ಮಾಧವ ನಾಯಕ ಅವರು ಭಾಗವಹಿಸಿದ್ದು, ವಿವಿಧ ಇಲಾಖೆಗಳ ಮೂಲಕ ಗುತ್ತಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಪದಾಧಿಕಾರಿಗಳು ಸಮಸ್ಯೆ ಬಗ್ಗೆ ಚರ್ಚಿಸಲು ಹೋದಾಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಅವಮಾನಿಸಿದನ್ನು ತೀವೃವಾಗಿ ಖಂಡಿಸಿದರು. ಸಚಿವರ ವರ್ತನೆ ವಿರುದ್ಧ ಎಲ್ಲರೂ ಸೇರಿ ಪ್ರತಿಭಟಿಸಬೇಕು ಎಂದು ಮಾಧವ ನಾಯಕ ಅವರು ಸೂಚಿಸಿದ್ದು, ಸೆ 10ರಂದು ಗುತ್ತಿಗೆದಾರರೆಲ್ಲರೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಕಾರವಾರದಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಮಾಧವ ನಾಯಕ ಅವರು ಘೋಷಿಸಿದರು.
ಉತ್ತರ ಕನ್ನಡ ಸಂಘದ ಕಾರ್ಯಕಾರಿ ಸದಸ್ಯರಾದ ಮಾಧವ ನಾಯಕ ಕಾರವಾರ, ಸತೀಶ್ ತೊಡುರಕರ್ ಸಿದ್ದಾಪುರ, ನಿತ್ಯಾನಂದ ನಾಯ್ಕ ಮಾವಿನಕೇರಿ ಅಂಕೋಲಾ ಸಭೆಯಲ್ಲಿ ತಮ್ಮ ಅನಿಸಿಕೆ ಹೇಳಿದರು. `ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕಾರವಾರ ಪಿಡಬ್ಲ್ಯುಡಿ ವಿಭಾಗದಲ್ಲಿ 76 ಕೋಟಿ, ಶಿರಸಿ ವಿಭಾಗದಲ್ಲಿ 92 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 75 ಕೋಟಿ ರೂ ಗುತ್ತಿಗೆದಾರರಿಗೆ ಪಾವತಿಯಾಗಬೇಕಿದೆ’ ಎಂದು ವಿವರಿಸಿದರು. `ಈ ಹಿಂದೆ ಗಂಗೂಬಾಯಿ ಮಾನಕರ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸ್ಥಳೀಯ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ನಗರಸಭೆ ಕಾರವಾರದಲ್ಲಿ ಗುತ್ತಿಗೆದಾರರ ಸಭೆ ಕರೆಯಲಾಗಿತ್ತು. ಹಳೆಯ ಬಾಕಿ ಪಾವತಿಸುವವರೆಗೆ ಹೊಸ ಗುತ್ತಿಗೆ ಕರೆಯದಂತೆ ಹಾಗೂ ಹಳೆ ಬಾಕಿ ಶೀಘ್ರ ಪಾವತಿಗೆ ಸೂಚಿಸಲಾಗಿತ್ತು. ಆದರೆ ಈವರೆಗೆ ಹಳೆ ಬಾಕಿ ಪಾವತಿಸದೆ ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಟೆಂಡರ್ ನಲ್ಲಿ ಭಾಗವಹಿಸಲು ಎಲ್ ಒ ಸಿ ಕೇಳಲಾಗುತ್ತಿದ್ದು, ಕೆಲವು ಇಲಾಖೆಗಳು ತಮ್ಮಲ್ಲಿ ನೊಂದಾವಣೆಯಾಗಿಲ್ಲ ಎನ್ನುವ ಕಾರಣಕ್ಕೆ ಗುತ್ತಿಗೆ ನೀಡುತ್ತಿಲ್ಲ. ಲೋಕೋಪಯೋಗಿ ಇಲಾಖೆ ಪ್ರಥಮ ದರ್ಜೆ ಗುತ್ತಿಗೆದಾರ ಎಂದು ಗುರುತಿಸಿದ ಬಳಿಕ ಮತ್ತೆ ಇತರೇ ಇಲಾಖೆಗಳಲ್ಲಿ ನೋಂದಾವಣೆ ಅಗತ್ಯವಲ್ಲ. ವರ್ಕ್’ಡನನ್ನು 5 ವರ್ಷದಿಂದ 10 ವರ್ಷಕ್ಕೆ ಅವಧಿ ಏರಿಸಬೇಕು’ ಎಂದು ಮಾಧವ ನಾಯಕ ಅವರು ಸಭೆಯ ಗಮನಕ್ಕೆ ತಂದರು.
ಅಗಲಿದ ಅಂಕೋಲಾ ಗುತ್ತಿಗೆದಾರ ವೆಂಕಟ್ರಮಣ ನಾಯ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ, ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ ಇನ್ನಿತರರು ಇದ್ದರು.
