ಸಾಧಿಸಬೇಕು ಎಂಬ ಛಲ, ದೃಢ ನಿರ್ಧಾರದ ಜೊತೆ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ತುಡಿತಹೊಂದಿದವರು ಶ್ರೀಕಾಂತ ಹಿಟ್ನಳ್ಳಿ ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದ ಶ್ರೀಕಾಂತ ಹಿಟ್ನಳ್ಳಿ ಅವರು ಹೊನ್ನಾವರದ ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಶ್ರೀಕಾಂತ ಹಿಟ್ನಳ್ಳಿ ಅವರ ಮನಸ್ಸು ಸಹ ವಿಜ್ಞಾನದಷ್ಟೇ ವಿಶಾಲ.
ಶ್ರೀಕಾಂತ ಹಿಟ್ನಳ್ಳಿ ಅವರ ತಂದೆ ಭೀಮಪ್ಪ ಹಿಟ್ನಳ್ಳಿ ಅವರು ಸಹ ಶಿಕ್ಷಕರಾಗಿದ್ದರು. ಶ್ರೀಕಾಂತ ಹಿಟ್ನಳ್ಳಿ ಅವರು ಶಿಕ್ಷಕರಾಗಲು ಅವರಿಗೆ ತಂದೆ ಭೀಮಪ್ಪ ಹಿಟ್ನಳ್ಳಿ ಅವರೇ ಪ್ರೇರಣೆಯಾದರು. ತಾಯಿ ಸುಶೀಲಾಬಾಯಿ ಅವರು ಶ್ರೀಕಾಂತ ಹಿಟ್ನಳ್ಳಿ ಅವರ ಶೈಕ್ಷಣಿಕ ಕನಸುಗಳಿಗೆ ಸಹಕಾರ ನೀಡಿದರು. ನಿರಂತರ ಅಧ್ಯಯ, ಸಾಕಷ್ಟು ಸವಾಲುಗಳನ್ನು ಎದುರಿಸಿದ ತರುವಯ ಶ್ರೀಕಾಂತ ಹಿಟ್ನಳ್ಳಿ ಅವರು ಅತ್ಯುತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.
ಬಾಗಲಕೋಟೆಯಲ್ಲಿ ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮುಗಿಸಿದ ಶ್ರೀಕಾಂತ ಹಿಟ್ನಳ್ಳಿ ಅವರು ವಿಜಯಪುರದ ಅಂಜುಮಾನ್ ಮಹಾವಿದ್ಯಾಲಯದಲ್ಲಿ ಬಿ ಎಸ್ಸಿ ಪದವಿಪಡೆದರು. ಬೆಳಗಾವಿಯ ಸಂಗೊಳ್ಳಿರಾಯಣ್ಣ ಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಮುಗಿಸಿದರು. ಅದಾದ ನಂತರ ಉದ್ಯೋಗಿ ಅರೆಸಿ ಹೊನ್ನಾವರದ ಕರ್ಕಿಗೆ ಬಂದಾಗ ಇಲ್ಲಿ ಗುರುತು-ಪರಿಚಯದವರು ಯಾರೂ ಇರಲಿಲ್ಲ. ಹೀಗಾಗಿ ಅಲ್ಲಿನ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಕಳೆದರು. ಬೆಳಗ್ಗೆ ರಾಮತೀರ್ಥದಲ್ಲಿ ಸ್ನಾನ ಮುಗಿಸಿದರು. ಕೈಯಲ್ಲಿದ್ದ 20 ರೂಪಾಯಿಯಲ್ಲಿ ಹಸಿವು ನೀಗಿಸಿ ಸಂದರ್ಶನಕ್ಕೆ ಹಾಜರಾದರು. ದೂರದ ಊರಿನಿಂದ ಬಂದ ಪ್ರತಿಭಾನ್ವಿತರೊಳಗಿನ ಪ್ರತಿಭೆಯನ್ನು ನಿವೃತ್ತ ನ್ಯಾಯಾಧೀಶ ಕೆ ಕೆ. ಅವಧಾನಿ ಅವರು ಗುರುತಿಸಿದರು. ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಅವರನ್ನು ಉಳಿಸಿ, ಉದ್ಯೋಗ ದೊರಕಿಸಿಕೊಟ್ಟರು. ಆ ದಿನ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶ್ರೀಕಾಂತ ಹಿಟ್ನಳ್ಳಿ ಅವರು ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ಅವರ ಸಾಧನೆ ಗುರುತಿಸಿದ ಸರ್ಕಾರ ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದೆ.
ಕಳೆದ 25 ವರ್ಷಗಳಿಂದ ಶ್ರೀಕಾಂತ ಹಿಟ್ನಳ್ಳಿ ಅವರು ವಿಜ್ಞಾನ ಪ್ರಯೋಗಗಳನ್ನುಹೊರತುಪಡಿಸಿ ಬೇರೆ ಯಾವ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ನಿರಂತರ ಕಲಿಕೆ ಜೊತೆ ತಾವು ಕಲಿತ ವಿಷಯವನ್ನು ಅವರು ಮಕ್ಕಳಿಗೂ ಕಲಿಸುತ್ತಿದ್ದಾರೆ. ಈ ನಡುವೆ ಮಂಗಳೂರಿನ ಸೇಂಟ್ ಏನಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಅವರು ತಮ್ಮ ಜ್ಞಾನವನ್ನು ಇನ್ನಷ್ಟು ಬೆಳಸಿಕೊಂಡರು. ತಮ್ಮೊಳಗಿನ ಪೂರ್ತಿ ಜ್ಞಾನವನ್ನು ಮಕ್ಕಳಿಗಾಗಿ ಮೀಸಲಿಟ್ಟರು. ತಮ್ಮೊಳಗಿನ ಸೃಜನಶೀಲತೆಯನ್ನು ಅವರು ಸರಿಯಾಗಿ ಬಳಸಿಕೊಂಡ ಅವರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದಕ್ಷಿಣ ಭಾರತದ ವಿಭಾಗೀಯ ವಿಜ್ಞಾನ ಮೇಳದವರೆಗೂ ವಿದ್ಯಾರ್ಥಿಗಳನ್ನು ಕರೆದೊಯ್ದರು.
ಪ್ರತಿ ವರ್ಷವೂ ವಿಜ್ಞಾನ ಗೋಷ್ಠಿ ,ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ನಾಟಕ, ವಿಜ್ಞಾನ ಪ್ರಬಂಧ ಹೀಗೆ ಶಿಕ್ಷಣ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆಯೋಜಿಸಿರುವ ಎಲ್ಲಾ ಸ್ಪರ್ಧೆಗಳಲ್ಲಿ ಶ್ರೀಕಾಂತ ಹಿಟ್ನಳ್ಳಿ ಅವರ ಬಳಿ ತರಬೇತಿಪಡೆದ ಮಕ್ಕಳು ಮುಂಚೂಣಿಯಲ್ಲಿದ್ದಾರೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎರಡು ಬಾರಿ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರಲ್ಲಿಯೂ ಶ್ರೀಕಾಂತ ಹಿಟ್ನಳ್ಳಿ ಅವರ ಕೊಡುಗೆ ಅಪಾರ. ಕೇಂದ್ರ ಸರ್ಕಾರದ ಇನ್ಸ್ಪೈರ್ಡ್ ಅವಾರ್ಡ್’ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಸಹ ಶ್ರೀಕಾಂತ ಹಿಟ್ನಳ್ಳಿ ಅವರ ಕೊಡುಗೆಯಿದೆ.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಜಿಲ್ಲಾ ಸಂಚಾಲಕರಾಗಿ, ರಾಜ್ಯಮಟ್ಟದ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ದೂರ ಶಿಕ್ಷಣ ಪಠ್ಯ ಪರಿಶೋಧನಾ ಸಮಿತಿಯ ಸದಸ್ಯರಾಗಿ, ಪರಿಸರ ಮಿತ್ರ ಶಾಲೆಯ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ವಿಜ್ಞಾನ ವಿಷಯ ಶಿಕ್ಷಕ ಕ್ಲಬ್ ನ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ ತಾಲೂಕ ಕಾರ್ಯದರ್ಶಿಯಾಗಿ ಜನಮನ್ನಣೆಗಳಿಸಿದ್ದಾರೆ.
ಲೇಖಕರು:

ಜೈ ರಂಗನಾಥ ಬಿ ಎಸ್
ವಿಜ್ಞಾನ ಶಿಕ್ಷಕರು, ಜನತಾ ವಿದ್ಯಾಲಯ ಮುದಗ, ಕಾರವಾರ
