ಕಾರವಾರ ನೌಕಾನೆಲೆ ವ್ಯಾಪ್ತಿಗೆ ಒಳಪಡುವ ವಜ್ರಕೋಶದಲ್ಲಿ ಕೆಲಸ ಮಾಡಲು ಯಂತ್ರೋಪಕರಣ ಅಗತ್ಯವಿರುವ ಬಗ್ಗೆ ಗುತ್ತಿಗೆದಾರರಲ್ಲಿ ಮಾತನಾಡಿದ್ದ ಉತ್ತರ ಪ್ರದೇಶದ ಕಂಪನಿಯವರು ಬಾಡಿಗೆ ಕೊಟ್ಟು ಯಂತ್ರಪಡೆಯುವ ಬದಲು ಅಂಕೋಲಾ ಬಳಿ ನಿಂತಿದ್ದ ಆ ಯಂತ್ರವನ್ನೆ ಕದ್ದೊಯ್ದಿದ್ದಾರೆ!
ವಜ್ರಕೋಶದ ಬಳಿ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಅಲ್ಲಿನ ಕೆಲ ಉಸ್ತುವಾರಿ ಉತ್ತರ ಪ್ರದೇಶದ ಜನಕಸಿಂಗ್ ಕಂಪನಿಗೆ ಸಿಕ್ಕಿತ್ತು. ವಿವಿಧ ಕೆಲಸಗಳಿಗಾಗಿ ಆ ಕಂಪನಿಗೆ ಸಿಮೆಂಟ್ ಮಿಕ್ಸರ್ ಯಂತ್ರ ಅಗತ್ಯವಿತ್ತು. ಹೀಗಾಗಿ ಆ ಕಂಪನಿಯ ಪ್ರತಿನಿಧಿ ಅರವಿಂದಕುಮಾರ್ ಅವರು ಕಾರವಾರದ ಪದ್ಮನಾಭನಗರದ ಗುತ್ತಿಗೆದಾರ ಸಿದ್ದಾರ್ಥ ನಾಯ್ಕ ಅವರನ್ನು ಸಂಪರ್ಕಿಸಿದ್ದರು. ಮಾಸಿಕ 2.5 ಲಕ್ಷ ರೂಪಾಯಿಗೆ ಬಾಡಿಗೆ ಮಾತುಕಥೆ ನಡೆಸಿದ್ದರು. ಇದಕ್ಕಾಗಿ 1 ಲಕ್ಷ ರೂ ಮುಂಗಡ ಹಣವನ್ನು ಪಾವತಿ ಮಾಡಿದ್ದರು.
ಅದಾದ ನಂತರ ಸಿದ್ದಾರ್ಥ ನಾಯ್ಕ ಅವರು ತಮ್ಮ ಬಳಿಯಿದ್ದ ಸಿಮೆಂಟ್ ಮಿಕ್ಸಿಂಗ್ ಯಂತ್ರವನ್ನು ಅಂಕೋಲಾದ ಬಾಳೆಗುಳಿ ಬಳಿಯ ಹಟ್ಟಿಕೇರಿ ಟೋಲ್ಗೇಟಿನ ಬಳಿ ನಿಲ್ಲಿಸಿದ್ದರು. ಆ ಯಂತ್ರಕ್ಕೆ ಆಪರೇಟರ್ ಇಲ್ಲದ ಕಾರಣ ಸಿದ್ಧಾರ್ಥ ನಾಯ್ಕ ಅವರು ಚಾಲಕರ ಹುಡುಕಾಟದಲ್ಲಿದ್ದರು. 2024ರ ಡಿಸೆಂಬರ್ 5ರಂದು ಜನಕಸಿಂಗ್ ಕಂಪನಿಯ ಅರವಿಂದ ಕುಮಾರ್ ಹಾಗೂ ವಿದತ್ ಚೌದರಿ ಸೇರಿ ಆ ಯಂತ್ರವನ್ನು ಅಲ್ಲಿಂದ ಅಪಹರಿಸಿದರು. ಟಾಕ್ಟರ್ ಚಾಲಕರೊಬ್ಬರ ನೆರವುಪಡೆದು ಆ ಯಂತ್ರವನ್ನು ವಜ್ರಕೋಶ ಒಳಗೆ ಒಯ್ದರು.
ಸಿದ್ದಾರ್ಥ ನಾಯ್ಕ ಅವರು ಟೋಲ್ಗೇಟ್ ಬಳಿ ಬಂದು ನೋಡಿದಾಗ ಅವರ ಮಾಲಿಕತ್ವದ ಸಿಮೆಂಟ್ ಮಿಕ್ಸರ್ ಯಂತ್ರ ಕಾಣೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಸಿದ್ದಾರ್ಥ ನಾಯ್ಕ ಅವರಿಗೆ ಮೋಸ ಮಾಡುವ ಉದ್ದೇಶದಿಂದ ಜನಕಸಿಂಗ್ ಕಂಪನಿಯವರು ಯಂತ್ರವನ್ನು ಅಪಹರಿಸಿದ ಬಗ್ಗೆ ಗೊತ್ತಾಯಿತು. ಜನಕಸಿಂಗ್ ಕಂಪನಿಯವರಿಗೆ ವಿಚಾರಿಸಿದಾಗ `ನಿಮ್ಮ ಯಂತ್ರ ಹಾಳಾಗಿದೆ. ಅದು ಸರಿಯಾಗಿಲ್ಲ’ ಎಂಬ ಸಬೂಬು ಕೊಟ್ಟರು. ಕಳ್ಳತನ ಮಾಡಿದ ಬಗ್ಗೆ ಎಷ್ಟು ಕೇಳಿದರೂ ಉತ್ತರಿಸಲಿಲ್ಲ. ಆ ಯಂತ್ರವನ್ನು ಮರಳಿ ತರುವ ಪ್ರಯತ್ನ ನಡೆಸಿದರೂ ಅದಕ್ಕೆ ಅವಕಾಶಕೊಡಲಿಲ್ಲ.
ವಜ್ರಕೋಶದ ಒಳಗೆ ನಡೆಯುತ್ತಿರುವ ಕೆಲಸಕ್ಕೆ ತಮ್ಮ ಸಿಮೆಂಟ್ ಮಿಕ್ಸಿಂಗ್ ಯಂತ್ರ ಬಳಸಿಕೊಂಡು, ಅದಕ್ಕೆ ಕಾಸು ಕೊಡದಿರುವ ಬಗ್ಗೆ ಸಿದ್ದಾರ್ಥ ನಾಯ್ಕ ಅವರು ಪೊಲೀಸ್ ದೂರು ನೀಡಿದರು. `ವಾಹನ ಸರಿಯಿದ್ದರೂ ಅದು ಹಾಳಾಗಿದೆ’ ಎಂದು ಸುಳ್ಳು ಹೇಳಿ ವಂಚಿಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿದರು.
