ಒಂದು ಕಾಲದಲ್ಲಿ ಪ್ರೀತಿ ಎನ್ನುವುದು ಸಹಜವಾಗಿ ಬೆಳೆಯುವ ಸಂಬoಧವಾಗಿತ್ತು. ಎಲ್ಲೋ ಭೇಟಿಯಾಗಿ, ನಾಲ್ಕು ಕಣ್ಣುಗಳು ಆಕರ್ಷಣೆಗೊಳಗಾಗಿ ಪ್ರೀತಿ ಮೊಳಕೆ ಒಡೆಯುತ್ತಿತ್ತು. ಆ ಪಾರ್ಕು-ಈ ದೇವಸ್ಥಾನ ಸುತ್ತಾಡಿದ ಪ್ರೇಮಿಗಳು ಮನೆ ಹಿರಿಯರನ್ನು ಒಪ್ಪಿಸಿ ಸಪ್ತಪದಿ ತುಳಿಯುವ ಸಾಹಸ ಮಾಡುತ್ತಿದ್ದರು. ಪಾಲಕರ ವಿರೋಧವಿದ್ದರೂ ಅನೇಕರು ಮನೆ ಬಿಡುತ್ತಿದ್ದರು. ಆದರೆ, ಇದೀಗ ಪ್ರೀತಿ-ಪ್ರೇಮ ಎನ್ನುವುದು ಲಾಗ್ ಇನ್ ಆಗು.. ಪ್ರೊಫೈಲ್ ನೋಡು, ಲೈಕ್ ಮಾಡು ಎನ್ನುವವರೆಗೆ ಬಂದು ಮುಟ್ಟಿದೆ. ಇದಕ್ಕೆ ಕಾರಣ ಡೇಟಿಂಗ್ ಆಪುಗಳಲ್ಲಿ ಹುಟ್ಟಿದ ಡಿಜಿಟಲ್ ಪ್ರೀತಿ!
ಫೋನ್ ಮಾಡಲು ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್ ಇದೀಗ ಸರ್ವ ಕೆಲಸಕ್ಕೂ ದೊಡ್ಡ ಸಾಧನವಾಗಿದೆ. ಮೊಬೈಲ್ ಮಹಿಮೆ ಪರಿಣಾಮ ವಿವಿಧ ಆಫ್ ನಮ್ಮ ಮನೆ-ಮನ ಪ್ರವೇಶಿಸಿದ್ದು, ಅವುಗಳಲ್ಲಿ ಡೇಟಿಂಗ್ ಆಫ್ ಡೇಂಜರ್ ಝೋನ್ ಎನಿಸಿದೆ. ಡೇಟಿಂಗ್ ಅಪ್ಲಿಕೇಶನ್’ಗಳು ಇಂದಿನ ಪ್ರೇಮ ಸಂಬoಧಗಳ ಎಲ್ಲ ಆಯಾಮಗಳನ್ನೂ ಪ್ರವೇಶಿಸಿದೆ. ನಿಜವಾದ ಪ್ರೀತಿಯನ್ನು ಮಾನಸಿಕ ನಾಶದ ಹಾದಿಗೆ ಒಯ್ಯುವಲ್ಲಿ ಈ ಆಪ್’ಗಳ ಕೊಡುಗೆ ಅಪಾರ. ಈ ವೇದಿಕೆಗಳು ನಿಮ್ಮ ಒಂಟಿತನಕ್ಕೆ ಪರಿಹಾರವೆಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಸಂಶೋಧನೆಗಳು ಬೆಚ್ಚಿಬೀಳಿಸುವ ವಾಸ್ತವವನ್ನು ಬಹಿರಂಗಪಡಿಸುತ್ತಿವೆ. ಈ ಅಪ್ಲಿಕೇಶನ್ ಆತಂಕ, ಖಿನ್ನತೆ, ಪ್ರತ್ಯೇಕತೆಯಿಂದ ನರಳುವ ಹೊಸ ಪೀಳಿಗೆಯನ್ನು ಸೃಷ್ಠಿಸುತ್ತಿವೆ.
2024ರಿಂದ 2025ರ ಪ್ರಾರಂಭದವರೆಗೆ ಭಾರತದಲ್ಲಿ 9.8 ಕೋಟಿ ಬಳಕೆದಾರರು ಡೇಟಿಂಗ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದಾರೆ. 2024ರ ಅಧ್ಯಯನದ ಪ್ರಕಾರ, ಶೇ 73ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರು ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ. 18ರಿಂದ 35 ವರ್ಷ ವಯಸ್ಸಿನ ಶೇ 19 ಮಹಿಳೆಯರು ಆನ್ಲೈನ್ ಮೂಲಕ ಭೇಟಿ ಆಗುವ ವ್ಯಕ್ತಿಗಳಿಂದ ಶಾರೀರಿಕ ಹಾನಿಯ ಬೆದರಿಕೆ ಅನುಭವಿಸಿದ್ದಾರೆ. 2017ರಿಂದ 2020ರವರೆಗೆ ಸಂಗ್ರಹಿಸಿದ ಡೇಟಾದ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಮೂಲಕ ನಡೆದ ಮೊದಲ ಭೇಟಿಗಳಲ್ಲಿ ಶೇ 18ರಷ್ಟು ಲೈಂಗಿಕ ದೌರ್ಜನ್ಯಗಳು ನಡೆದಿವೆ.
ಭಾರತದಲ್ಲಿ ಡೇಟಿಂಗ್ ಅಪ್ಲಿಕೇಶನ್ ಬಳಕೆಯ ನವೀಕೃತ ಅಂಕಿ-ಅAಶಗಳ ಪ್ರಕಾರ, 2020ರಲ್ಲಿ 4.3 ಕೋಟಿ ಬಳಕೆದಾರರಿಂದ 2025ರ ಹೊತ್ತಿಗೆ ಶೇ 120ರಷ್ಟು ವೃದ್ಧಿಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಪುಣೆ ಇತ್ಯಾದಿ ನಗರಗಳಲ್ಲಿ ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಬಿಳಗಿ, ಉಜ್ಜಯಿನಿ, ಇಂದೋರ್, ಮೈಸೂರಿನಂತಹ ಪಟ್ಟಣಗಳಲ್ಲಿಯೂ ಡೇಟಿಂಗ್ ಆಪ್ ಬಳಕೆದಾರರ ಪ್ರಮಾಣ ಮಿತಿ ಮೀರಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಈ ಆಫ್ ಬಳಸಿ ಪ್ರೀತಿಯ ಮಾಯೆಗೆ ಬಿದ್ದವರ ಸಂಖ್ಯೆ ಕಡಿಮೆ ಏನಿಲ್ಲ!
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಂತೆ 2023ರವರೆಗೆ ಡೇಟಿಂಗ್ ಅಪ್ಲಿಕೇಶನ್ ಮೂಲಕ ಮೋಸ ಅಥವಾ ಲೈಂಗಿಕ ಶೋಷಣೆಗೆ ಒಳಪಟ್ಟ ಕುರಿತು 3,100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಭಯೋತ್ಪಾದನೆ ಅಥವಾ ಬ್ಲ್ಯಾಕ್ಮೇಲ್ ಪ್ರಕರಣಗಳಲ್ಲಿ ಶೇ 60ಮಂದಿ 18-35 ವರ್ಷದ ಯುವ ಜನರೇ ಇದ್ದಾರೆ. ಡೇಟಿಂಗ್ ಅಪ್ಲಿಕೇಶನ್ ಮೂಲಕ ನಡೆದ ಮೋಸಗಳಲ್ಲಿ ಶೇ 35ಕ್ಕಿಂತ ಹೆಚ್ಚು ಫೋಟೋ ಅಥವಾ ವೀಡಿಯೋ ಬ್ಲ್ಯಾಕ್ಮೇಲ್ ಕುರಿತಾಗಿದೆ.
ಡೇಟಿಂಗ್ ಅಪ್ಲಿಕೇಶನ್ ಬಳಕೆ ತೀರಾ ವೈಯಕ್ತಿಕವಾದದ್ದು. ನಿಮ್ಮ ಹಾಗೂ ಕಡೆಯವರ ಪ್ರೊಫೈಲ್’ಲಿ ಇರುವವರು ಅದೇನು ಮಾತನಾಡಿಕೊಳ್ಳುತ್ತೀರಿ, ಅದೇನು ವ್ಯವಹರಿಸುತ್ತೀರಿ ಎಂಬುದು ನಿಮಗಷ್ಟೇ ಗೊತ್ತು. ಆದರೆ, ನೀವು ಯೋಚಿಸುತ್ತಿರುವಂತೆಯೇ ಆ ಕಡೆಯವರು ಯೋಚಿಸುತ್ತಿರಬೇಕೆಂಬುದಿಲ್ಲ. ಅಸಲಿಗೆ, ಪ್ರೊಫೈಲ್ ಫೋಟೋದಲ್ಲಿ ಇದ್ದಂತೆ, ಚಾಟ್ ಮಾಡಿದಂತೆಯೇ ನೈಜ ರೂಪದಲ್ಲಿಯೂ ಇರಬೇಕೆಂದಿಲ್ಲ ಎಂಬ ವಾಸ್ತವ ಎಲ್ಲರೂ ತಿಳಿಯಲೇ ಬೇಕು.
ಮುನ್ನಚ್ಚರಿಕಾ ಕ್ರಮವಾಗಿ ಈ ಆಫ್ ಬಳಸುವವರು ನಿಜವಾದ ಮಾಹಿತಿಗಳನ್ನು ಮಾತ್ರವೇ ನೀಡಿ. ಮೊದಲ ಭೇಟಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಾತ್ರ ನಿಗದಿಪಡಿಸಿ. ಹಿಂದುಮುAದು ಏನನ್ನೂ ವಿಚಾರಿಸದೇ, ಅರಿಯದೇ ಯಾರನ್ನೋ ಬಹುಬೇಗ ನಂಬುವುದನ್ನು ಬಿಡಿ. ಫೋಟೋ, ಅರೆನಗ್ನ ಫೋಟೋ ಅಥವಾ ಹಣದ ಬೇಡಿಕೆ ಇಡುವವರಿಗೆ `ಇಲ್ಲ’ ಎಂಬ ಸ್ಪಷ್ಟ ಉತ್ತರ ಮಾತ್ರ ನಿಮ್ಮದಾಗಿರಲಿ. ಫೇಸ್ಬುಕ್ ಮಾದರಿಯಲ್ಲಿಯೇ ಈ ಡೇಟಿಂಗ್ ಆಪ್’ಗಳಲ್ಲಿ ಸಹ ಫೇಕ್ ಪ್ರೊಫೈಲ್ ಸಮಸ್ಯೆ ಹೆಚ್ಚಾಗಿದೆ. ಡೇಟಿಂಗ್ ಅಪ್ಲಿಕೇಶನ್ ಕೆಲವರಿಗೆ ಆತ್ಮವಿಶ್ವಾಸ, ಪ್ರಬುದ್ಧತೆ, ವಿಶಾಲ ದೃಷ್ಟಿಕೋನ ನೀಡುತ್ತವೆ ಎಂಬ ವಾದವಿದ್ದರೂ ಕೆಲವರಿಗೆ ಅವಲಂಬನೆ, ನಿರಾಶೆ ಅಥವಾ ಸಂಬoಧದ ಮೌಲ್ಯಗಳ ಮೆಲೆ ಅನುಮಾನವನ್ನೂ ಮೂಡಿಸುವ ಸಾಧ್ಯತೆಗಳಿದೆ. ಕೆಲವು ಅತ್ಯಾಚಾರ, ಹಲ್ಲೆ, ಮಾನಸಿಕ ಕಿರುಕುಳ ಪ್ರಕರಣಗಳ ಮೂಲ ಇಂತಹ ಡೇಟಿಂಗ್ ಅಪ್ಲಿಕೇಶನ್ ಎಂಬುದೂ ಬೆಳಕಿಗೆ ಬಂದಿದೆ. ಎಚ್ಚರಿಕೆಯಿಂದ ಬಳಸಿ.. ಜವಾಬ್ದಾರಿಯಿಂದ ವರ್ತಿಸಿ.
