ಗಣೇಶ ಉತ್ಸವದ ವೇಳೆ ಡಿಜೆ ಬಳಸುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಕುಮಟಾದ ಡಾ ರವಿರಾಜ ಕಡ್ಲೆ ಅವರ ಮೇಲೆ ಹಲ್ಲೆ ನಡೆದಿದೆ. ಡಾ ರವಿರಾಜ ಕಡ್ಲೆ ಅವರು ಸಹ ಗಣೇಶ ಉತ್ಸವ ಸಮಿತಿಯವರ ಜಾತಿ ಬಗ್ಗೆ ಮಾತನಾಡಿ ನಿಂದಿಸಿದ ಆರೋಪ ಎದುರಿಸುತ್ತಿದ್ದಾರೆ.
ಸೆಪ್ಟೆಂಬರ್ 3ರಂದು ಕುಮಟಾದ ನೆಲ್ಲಿಕೇರಿ ಹಳೆ ಬಸ್ ನಿಲ್ದಾಣದ ಬಳಿ ದೊಡ್ಡದಾಗಿ ಡಿಜೆ ಹಚ್ಚಿದ ಬಗ್ಗೆ ಗುಜರಿಗಲ್ಲಿಯ ಪ್ರಿಯಾ ವೈದ್ಯ ಅವರು ಪೊಲೀಸ್ ದೂರು ನೀಡಿದ್ದರು. ಗಣೇಶ ಮೂರ್ತಿ ವಿಸರ್ಜನೆ ವೇಳೆ ದೊಡ್ಡದಾಗಿ ಡಿಜೆ ಹಚ್ಚಿದ್ದರಿಂದ ತಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರಾದ ಬಗ್ಗೆ ಅವರು ವಿವರಿಸಿದ್ದರು. ಅಶ್ವಿನಿದಾಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅವರು ತಮ್ಮ ತಂದೆಯ ಹಾಗೇ ಇತರೆ ರೋಗಿಗಳಿಗೂ ಸಮಸ್ಯೆ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸೆಪ್ಟೆಂಬರ್ 4ರಂದು ಅಶ್ವಿನಿಧಾಮ ಆಸ್ಪತ್ರೆಯ ಮುಖ್ಯಸ್ಥ ಡಾ ರವಿರಾಜ ಕಡ್ಲೆ ಅವರು ಬಸ್ ನಿಲ್ದಾಣದ ಬಳಿ ಹೋದಾಗ ಅಲ್ಲಿದ್ದ 40-50 ಜನ ಡಾ ರವಿರಾಜ ಕಡ್ಲೆ ಅವರ ಮೇಲೆ ದಾಳಿ ಮಾಡಿದರು. ಡಾ ರವಿರಾಜ ಕಡ್ಲೆ ಅವರನ್ನು ಸುತ್ತುವರೆದ ಜನ ಅವರನ್ನು ಪೆಂಡಾಲ್ ಒಳಗೆ ಕರೆದೊಯ್ದು ಪ್ರಜ್ಞೆ ತಪ್ಪುವ ರೀತಿ ಬಾರಿಸಿದರು. ಈ ಹೊಡೆದಾಟ ತಪ್ಪಿಸಲು ಹೋಗಿದ್ದ ಅಶ್ವಿನಿದಾಮ ಸಿಬ್ಬಂದಿ ಜ್ಯೋತಿ ನಾಯ್ಕ ಅವರಿಗೂ ಅಲ್ಲಿದ್ದವರು ಹೊಡೆದರು.
ಈ ವೇಳೆ ಅಲ್ಲಿದ್ದವರು `ಚಿಮಣಿ ಎಣ್ಣೆ ತಂದು ಅವರನ್ನು ಸಟ್ಟು ಬಿಡೋಣ’ ಎಂದರು. ಮತ್ತೊಬ್ಬರು `ಅವರ ತಲೆಯನ್ನು ಇಲ್ಲಿಯೇ ಒಡೆದು ಬಿಡೋಣ’ ಎಂದಿರುವದನ್ನು ಜ್ಯೋತಿ ನಾಯ್ಕ ಅವರು ಕೇಳಿಸಿಕೊಂಡರು. ತಮ್ಮ ಮೇಲೆ ದಾಳಿ ಮಾಡಿದವರ ಪೈಕಿ ನೆಲ್ಲಿಕೇರಿಯ ವಿನಾಯಕ ನಾಯ್ಕ ಹಾಗೂ ರಾಘವೇಂದ್ರ ಎಂಬಾತರನ್ನು ಜ್ಯೋತಿ ನಾಯ್ಕ ಅವರು ಗುರುತಿಸಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
`ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಮಾಡಿ ಖರ್ಚು-ವೆಚ್ಚದ ಲೆಕ್ಕ ಮಾಡುತ್ತಿರುವಾಗ ಡಾ ರವಿರಾಜ ಕಡ್ಲೆ ಹಾಗೂ ಜ್ಯೋತಿ ನಾಯ್ಕ ಆಗಮಿಸಿ ತಮಗೆ ಜಾತಿ ನಿಂದನೆ ಮಾಡಿದರು’ ಎಂದು ಕುಮಟಾ ವಾಲ್ಗಳ್ಳಿಯ ಗಣಪತಿ ಮುಕ್ರಿ ಅವರು ಪೊಲೀಸ್ ದೂರು ನೀಡಿದರು. `ಗಜಾನನ ಉತ್ಸವ ಸಮಿತಿ ಕಾರ್ಯದರ್ಶಿ ವಿನಾಯಕ ನಾಯ್ಕ ಹಾಗೂ ಸದಸ್ಯರಾದ ನಿತ್ಯಾನಂದ ನಾಯ್ಕ, ಯಶ್ವಂತ ಗೌಡ ಇತರರು ಸೇರಿ ಸಭೆ ನಡೆಸುವಾಗ ಡಾ ರವಿರಾಜ ಕಡ್ಲೆ ಹಾಗೂ ಜ್ಯೋತಿ ನಾಯ್ಕ ಅವರು ಬಂದರು. ಈ ಸಮಿತಿ ಮುಖ್ಯಸ್ಥ ಯಾರು? ಎಂದು ಪ್ರಶ್ನಿಸಿದರು. ಆಗ ತಾನು ಎದ್ದು ನಿಂತು ನಿಮಗೆ ಏನಾಗಬೇಕು? ಎಂದು ಕೇಳಿದಾಗ ಜಾತಿ ಬಗ್ಗೆ ನಿಂದಿಸಿ ಕೈ ಮಾಡಿದರು’ ಎಂದು ಗಣಪತಿ ಮುಕ್ರಿ ಅವರು ಪೊಲೀಸರಿಗೆ ವಿವರಿಸಿದರು. `ತಮ್ಮನ್ನು ಬಿಡಿಸಲು ಬಂದವರಿಗೂ ಅವರಿಬ್ಬರು ಹೊಡೆದರು. ವಿನಾಯಕ ನಾಯ್ಕ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಹರಿದರು. ಇದರಿಂದ ಸೋಕನಮಕ್ಕಿಯ ಮಾದೇವಿ ಮುಕ್ರಿ, ಸುಜಾತಾ ಮುಕ್ರಿ, ಸರ್ವೋತ್ತಮ ಹೆಗಡೆ ಅವರಿಗೂ ನೋವಾಗಿದೆ’ ಎಂದು ಗಣಪತಿ ಮುಕ್ರಿ ಪೊಲೀಸ್ ದೂರು ನೀಡಿದರು.
ಎರಡು ಕಡೆಯವರ ದೂರು ಆಲಿಸಿದ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಶುರು ಮಾಡಿದ್ದಾರೆ.
