15 ವರ್ಷಗಳಿಂದ ಯೋಗ ಸಾಧನೆಯಲ್ಲಿ ತೊಡಗಿರುವ ಯಲ್ಲಾಪುರ ಹುಟಕಮನೆ ಶಾಲೆ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರಿಗೆ ಒಂದೇ ದಿನ ಎರಡು ಪುರಸ್ಕಾರ ಸಿಕ್ಕಿದೆ.
ಬೆಂಗಳೂರಿನ ರೋಟರಿ ಕ್ಲಬ್, ಗ್ಲೋಬಲ್ ಯೋಗ ಸಂಸ್ಥೆಯವರು ಶಿಕ್ಷಕರ ಸಾಧನೆ ಗುರುತಿಸಿದ್ದಾರೆ. ಅದರ ಪರಿಣಾಮವಾಗಿ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಅಮೇರಿಕಾದ ಯೋಗ ಯುನಿವರ್ಸಿಟಿ ನೀಡುವ ರಾಜ್ಯಮಟ್ಟದ ಯೋಗ ಜ್ಯೋತಿ ಅವಾರ್ಡನ್ನು ಸ್ವೀಕರಿಸಿದ್ದಾರೆ. ಸೆಪ್ಟೆಂಬರ್ 5ರಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಗಿದೆ.
ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಆಯೋಜಿಸಿದ ಯೋಗಾಸನ ಸ್ಪರ್ಧೆಯಲ್ಲಿ ಸಹ ಸುಬ್ರಾಯ ಭಟ್ಟ ಆನೆಜಡ್ಡಿಯವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಅವರು ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿನ್ನಲೆ ಯಲ್ಲಾಪುರದ ಎಪಿಎಂಸಿಯಲ್ಲಿ ಸಹ ಅವರ ಸಾಧನೆಯನ್ನು ಸ್ಮರಿಸಲಾಗಿದೆ. ಶುಕ್ರವಾರ ಶಿಕ್ಷಕ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸುಬ್ರಾಯ ಭಟ್ಟ ಆನೆಜಡ್ಡಿ ಅವರ ಪರವಾಗಿ ಅವರ ಪತ್ನಿ ಗಾಯತ್ರಿ ಭಾಗವತ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು.
ಗಾಯತ್ರಿ ಭಾಗವತ ಅವರು ಹಾಸಣಗಿ ಶಾಲೆಯ ಶಿಕ್ಷಕರಾಗಿದ್ದಾರೆ. ಶಿಕ್ಷಕರಿಗಾಗಿ ನಡೆದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿಯೂ ಅವರು ಬಹುಮಾನ ಸ್ವೀಕರಿಸಿದರು. ಗಾಯತ್ರಿ ಭಾಗವತ ಅವರು ಸಹ ಉತ್ತಮ ಯೋಗಪಟುವಾಗಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಯೋಗ ಸ್ಪರ್ಧೆಯಲ್ಲಿ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಕಳೆದ ಯೋಗ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಹಾಗೂ ಈ ವರ್ಷ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
