ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಅಂಕೋಲಾದ ಚಂದ್ರಕಲಾ ಗೌಡ ಅವರು ತಾವು ಪ್ರೀತಿಸಿದ ಸಾಯಿನಾಥ ಶೇಟ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಅವರ ಮದುವೆಯನ್ನು ಒಪ್ಪಿದ ಗುರು-ಹಿರಿಯರು ಹೊಸ ಜೋಡಿಯನ್ನು ಮನೆ ತುಂಬಿಸಿಕೊoಡಿದ್ದಾರೆ.
ಅoಕೋಲಾ ಅಗ್ರಗೋಣ ಬಳಿಯ ಅಡಿಗೋಣ ಬೈಲಕೇರಿಯ ಚಂದ್ರಕಲಾ ಗೌಡ (20) ಅವರು ಸೆಪ್ಟೆಂಬರ್ 1ರಂದು ಕಾಣೆಯಾಗಿದ್ದರು. ಈ ಬಗ್ಗೆ ಚಂದ್ರಕಲಾ ಗೌಡ ಅವರ ತಂದೆ ನೀಲಕಂಠ ಗೌಡ ಅವರು ಆತಂಕಕ್ಕೆ ಒಳಗಾಗಿದ್ದರು. ಎಲ್ಲಾ ಕಡೆ ಮಗಳ ಹುಡುಕಾಟ ನಡೆಸಿದ ಅವರು ಬೇರೆ ದಾರಿಯಿಲ್ಲದೇ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಂದ್ರಕಲಾ ಗೌಡ ಅವರ ಹುಡುಕಾಟ ಶುರು ಮಾಡಿದ್ದರು.
ಚಂದ್ರಕಲಾ ಗೌಡ ಅವರು ಅದೇ ಊರಿನ ಸಾಯಿನಾಥ ಶೇಟ್ ಅವರನ್ನು ಪ್ರೀತಿಸುತ್ತಿದ್ದರು. ಸಾಯಿನಾಥ ಶೇಟ್ ಅವರು ಚಂದ್ರಕಲಾ ಗೌಡ ಅವರನ್ನು ಮದುವೆ ಆಗುವ ಮಾತು ನೀಡಿದ್ದರು. ಅವರ ಪ್ರೀತಿಗೆ ವಿರೋಧವ್ಯಕ್ತವಾಗುವ ಆತಂಕದ ಹಿನ್ನಲೆ ಆ ಇಬ್ಬರು ಮನೆಬಿಟ್ಟು ಹೋಗಿದ್ದರು. ಬೆಳಗಾವಿ ಪ್ರವೇಶಿಸಿದ ಅವರಿಬ್ಬರು ಅಲ್ಲಿಯೇ ಮದುವೆ ಆಗಿದ್ದರು. ಈ ವೇಳೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಅವರ ಗಮನಕ್ಕೆ ಬಂದಿತು. ಹೀಗಾಗಿ ಶುಕ್ರವಾರ ಸಂಜೆ ಅವರಿಬ್ಬರು ಅಂಕೋಲಾಗೆ ಆಗಮಿಸಿದರು.
ಪೊಲೀಸ್ ಠಾಣೆಗೆ ಬಂದ ನೂತನ ದಂಪತಿ ನಡೆದ ವಿದ್ಯಮಾನಗಳೆಲ್ಲವನ್ನು ವಿವರಿಸಿದರು. `ನಾವಿಬ್ಬರೂ ಜೀವನಪೂರ್ತಿ ಜೊತೆಯಾಗಿರುತ್ತೇವೆ’ ಎಂದು ಪೊಲೀಸರ ಮುಂದೆ ಪ್ರಮಾಣ ಮಾಡಿದರು. ಪೊಲೀಸರು ಪಾಲಕರನ್ನು ಕರೆಯಿಸಿ ಅವರಿಬ್ಬರ ಪ್ರೀತಿ-ಪ್ರೇಮ-ಮದುವೆಯ ವಿಷಯ ತಿಳಿಸಿದರು. ಕೊನೆಗೆ ಕುಟುಂಬದವರು ಈ ಮದುವೆಯನ್ನು ಒಪ್ಪಿ, ಚಂದ್ರಕಲಾ ಗೌಡ ಅವರನ್ನು ದ ಸಾಯಿನಾಥ ಶೇಟ್ ಅವರ ಮನೆಗೆ ಕಳುಹಿಸಿದರು.
