ಚಿನ್ನ, ಕಾರು ಹಾಗೂ ಹಣಕ್ಕಾಗಿ ಪತ್ನಿ ಪೀಡಿಸಿ ಆಕೆಯ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ ನ್ಯಾಯಾಧೀಶ ಕಿರಣ ಕೇಣಿ ಅವರು 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 2019ರಲ್ಲಿ ದಾಂಡೇಲಿ ಡಿವೈಎಸ್ಪಿಯಾಗಿದ್ದ ಪಿ ಮೋಹನ ಪ್ರಸಾದ್ ಹಾಗೂ ಶಿರಸಿ ಕೋರ್ಟಿನ ಈಗಿನ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ ಮಳಗಿಕರ್ ಅವರ ಪ್ರಯತ್ನದಿಂದಾಗಿ ಪತ್ನಿ ಪೀಡಕನಿಗೆ ಶಿಕ್ಷೆಯಾಗಿದೆ.
ಜೊಯಿಡಾ ತಾಲೂಕಿನ ಕ್ಯಾಸಲ್ ರಾಕ್ ಬಳಿಯ ರೈಲ್ವೆ ವಸತಿ ಗೃಹದಲ್ಲಿ ವಾಸವಾಗಿರುವ ರಾಘವೇಂದ್ರ ಕೆ ಎಸ್ ಅವರನ್ನು ದಿವ್ಯಾ ಅವರು ವರಿಸಿದ್ದರು. ಮದುವೆ ವೇಳೆ ಸಾಕಷ್ಟು ಪ್ರಮಾಣದಲ್ಲಿ ರಾಘವೇಂದ್ರ ಕೆ ಎಸ್ ವರದಕ್ಷಿಣೆಪಡೆದಿದ್ದು, ಮದುವೆ ನಂತರವೂ ಚಿನ್ನ ಹಾಗೂ ಕಾರು ಕೊಡಿಸುವಂತೆ ಪತ್ನಿಯ ತವರುಮನೆಯವರನ್ನು ಪೀಡಿಸುತ್ತಿದ್ದರು. ದಿವ್ಯಾ ಅವರನ್ನು ತವರುಮನೆಗೂ ಕಳುಹಿಸದೇ ಹಿಂಸೆ ನೀಡುತ್ತಿದ್ದರು. ಆಗಾಗ, ಹೊಡೆಯುವುದು-ಬಡಿಯುವುದನ್ನು ಮಾಡುತ್ತಿದ್ದರು. ರಾಘವೇಂದ್ರ ಕೆ ಎಸ್ ಅವರ ಬಂಧನದಲ್ಲಿರುವ ದಿವ್ಯಾ ಅವರಿಗೆ ಅಕ್ಕ-ತಂಗಿಯರ ಜೊತೆ ಫೋನಿನಲ್ಲಿ ಮಾತನಾಡುವ ಅಧಿಕಾರ ಸಹ ಇರಲಿಲ್ಲ.
2019ರ ಫೆ 14ರಂದು ಜಾತ್ರೆ ತವರೂರಿನ ಮಾರಿಜಾತ್ರೆಗೆ ಹೋಗೋಣ ಎಂದು ದಿವ್ಯಾ ಪತಿ ಬಳಿ ಹೇಳಿದ್ದರು. ಆದರೆ, ರಾಘವೇಂದ್ರ ಕೆ ಎಸ್ ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಅದಾಗಿಯೂ ದಿವ್ಯಾ ಮಾತ್ರ ಜಾತ್ರೆಗೆ ಹೋಗಿದ್ದರು. ಆಗ, ರಾಘವೇಂದ್ರ ಕೆ ಎಸ್ ಅವರ ಕುಟುಂಬದವರಾದ ಶ್ರೀನಿವಾಸ ರಾವ್ ಹಾಗೂ ಕೌಶಲ್ಯ ಅವರು ದಿವ್ಯಾ ಅವರ ತವರು ಮನೆಗೆ ಹೋಗಿ ಅವರ ಪಾಲಕರನ್ನು ನಿಂದಿಸಿದ್ದರು. `ನಿಮ್ಮ ಮಗಳನ್ನು ನೀವೇ ಇಟ್ಟುಕೊಳ್ಳಿ. ನಮ್ಮ ಮನೆಗೆ ಕಳುಹಿಸುವುದು ಬೇಡ’ ಎಂದು ತಾಕೀತು ಮಾಡಿದ್ದರು.
ಅದಾಗಿಯೂ, ಪತಿಗೆ ಸಮಸ್ಯೆ ಆಗುತ್ತಿರುವುದನ್ನು ಅರಿತು 2019ರ ಮಾರ್ಚ 19ರಂದು ದಿವ್ಯಾ ಅವರು ಕ್ಯಾಸಲ್ ರಾಕ್’ಗೆ ಬಂದರು. ಆಗ, ರಾಘವೇಂದ್ರ ಕೆ ಎಸ್ ಜೊತೆ ಶ್ರೀನಿವಾಸ ರಾವ್ ಹಾಗೂ ಕೌಶಲ್ಯ ಸೇರಿ ದಿವ್ಯಾ ಅವರನ್ನು ಬಾಗಲಿನಲ್ಲಿಯೇ ತಡೆದರು. ಚಿನ್ನ ಹಾಗೂ ಕಾರು ತರದ ಬಗ್ಗೆ ಪ್ರಶ್ನಿಸಿ ನಿಂದಿಸಿದರು. ದಿವ್ಯಾ ಅವರಿಗೆ ಅನೈತಿಕ ಸಂಬoಧವಿರುವ ಹಣೆಪಟ್ಟಿ ಕಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದರು.
ಈ ಎಲ್ಲಾ ವಿದ್ಯಮಾನದಿಂದ ನೊಂದ ದಿವ್ಯಾ ಅವರು ತಮ್ಮ ಮಲಗುವ ಕೋಣೆಗೆ ತೆರಳಿ ನೇಣು ಹಾಕಿಕೊಂಡು ಸಾವನಪ್ಪಿದ್ದರು. ಇದನ್ನು ನೋಡಿದ ಕೌಶಲ್ಯಾ ಅವರು ಒಬ್ಬಂಟಿಯಾಗಿ ನೇಣು ಹಾಕಿಕೊಂಡಿದ್ದ ದಿವ್ಯಾ ಅವರನ್ನು ಕೆಳಗಿಳಿಸಿ, ಕೋಣೆಯಲ್ಲಿದ್ದ ಕಾಟು-ಟ್ರಂಕುಗಳನ್ನು ಬದಿಗಿರಿಸಿ ಸಾಕ್ಷಿ ನಾಶದ ಪ್ರಯತ್ನ ಮಾಡಿದ್ದರು. ಅದಾಗಿಯೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು.
ದಾಂಡೇಲಿಯ ಪೊಲೀಸ್ ಉಪಾಧೀಕ್ಷಕರಾಗಿದ್ದ ಪಿ ಮೋಹನ ಪ್ರಸಾದ್ ಅವರು ಈ ಪ್ರಕರಣದ ತನಿಖೆ ನಡೆಸಿದರು. ವಿವಿಧ ಆಯಾಮಗಳಲ್ಲಿ ಸಾಕ್ಷಿ ಸಂಗ್ರಹಿಸಿ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಅದೇ ಆಧಾರದಲ್ಲಿ ಶಿರಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪಬ್ಲಿಕ್ ಪ್ಯಾಸಿಕ್ಯೂಟರ್ ರಾಜೇಶ ಮಳಗಿಕರ್ ವಾದ ಮಾಡಿದರು. ವಿವಿಧ ಸಾಕ್ಷಿ ಹಾಗೂ ದಾಖಲೆಗಳನ್ನು ನ್ಯಾಯಾಲಯದ ಮುಂದಿರಿಸಿದ ಅವರು ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯದ ಬಗ್ಗೆ ತಪ್ಪಿತಸ್ಥರಿಗೆ ಭಯ ಬರುವ ನಿಟ್ಟಿನಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಾಧೀಶ ಕಿರಣ ಕೇಣಿ ಅವರು ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳದೇ ಮುಖ್ಯ ಆರೋಪಿಯಾಗಿರುವ ರಾಘವೇಂದ್ರ ಕೆ ಎಸ್ ಅವರಿಗೆ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದರು. ಜೊತೆಗೆ 17 ಸಾವಿರ ರೂ ದಂಡ ವಿಧಿಸಿದರು. ದಿವ್ಯಾ ಅವರ ತವರುಮನೆಯವರಿಗೂ 25 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದರು.
