ಜೊಯಿಡಾದ ಕಾಳಿ ಹಿನ್ನೀರಿನಲ್ಲಿ ಬಿದ್ದರೂ ಹೋರಾಡಿದ 75ರ ಅಜ್ಜಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ದಡದಲ್ಲಿ ಬಿದ್ದಿದ್ದ ಅಜ್ಜಿಯನ್ನು ಪೊಲೀಸರು ರಕ್ಷಿಸಿ ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕಾರವಾರದ ಕಲ್ಪನಾ ಎಂಬಾತರು ಎರಡು ವರ್ಷದಿಂದ ಜೊಯಿಡಾದಲ್ಲಿದ್ದಾರೆ. ತಮ್ಮ ತವರುಮನೆಯಾದ ಗಂಗೋಡ ಗ್ರಾ ಪಂ ವ್ಯಾಪ್ತಿಯ ರುಂಡಾಳಿಯಲ್ಲಿ ಅವರು ವಾಸವಾಗಿದ್ದಾರೆ. ಪತಿ-ಮಕ್ಕಳು ಯಾರೂ ಇಲ್ಲದ ಅಜ್ಜಿಗೆ ಅವರ ತಮ್ಮ ದುರ್ಗಾದಾಸ್ ಮಿರಾಶಿ ಅವರು ಅಜ್ಜಿಗೆ ಆಶ್ರಯ ನೀಡಿದ್ದಾರೆ.
ಶನಿವಾರ ಜೊಯಿಡಾದ ಸುಪಾ ಜಲಾಶಯದ ಡೊಣಪ ಗ್ರಾಮದ ಹಿನ್ನೀರು ಪ್ರದೇಶದ ಬಳಿ ತೆರಳಿದ್ದ ಅಜ್ಜಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಹರಸಾಹಸದಿಂದ ದಡ ತಲುಪಿದರು. ಅಜ್ಜಿ ಕಾಣದಿರುವುದರಿಂದ ಗಾಬರಿಯಾದ ದುರ್ಗಾದಾಸ್ ಮಿರಾಶಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು. ಕುಂಬಾರವಾಡದ ಪ್ರಸನ್ನ ಗಾವುಡ ಮತ್ತು ದಯಾನಂದ ಅವರು ಅಜ್ಜಿಯೊಬ್ಬರು ನದಿ ಅಂಚಿನಲ್ಲಿ ಬಿದ್ದಿರುವುದನ್ನು ಪಿಎಸ್ಐ ಮಹೇಶ ಮಾಳಿ ಅವರಿಗೆ ತಿಳಿಸಿದರು.
ಪೊಲೀಸರು ಸ್ಥಳಕ್ಕೆ ಹೋದಾಗ ಕಲ್ಪನಾ ಅವರು ಕಾಳಿ ನದಿ ತೀರದಲ್ಲಿ ಎಚ್ಚರ ತಪ್ಪಿ ಬಿದ್ದಿದ್ದರು. ಅವರನ್ನು ಆರೈಕೆ ಮಾಡಿದ ಪೊಲೀಸರು ಅಜ್ಜಿಯ ವಿಚಾರಣೆ ನಡೆಸಿದರು. ಆಶ್ರಯ ನೀಡಿದ ಮನೆಯಲ್ಲಿ ಆರೈಕೆ ಸರಿಯಿಲ್ಲದ ಬಗ್ಗೆ ಅಜ್ಜಿ ಹೇಳಿದ್ದು, ಕೊನೆಗೆ ಪೊಲೀಸರು ಅವರನ್ನು ಜೊಯಿಡಾದ ಪ್ರಗತಿ ನಿಲಯ ಅನಾಥಾಶ್ರಮಕ್ಕೆ ಸೇರಿಸಿದರು. ಅದಕ್ಕೂ ಮುನ್ನ ಪೊಲೀಸ್ ಸಿಬ್ಬಂದಿ ಅಖಿಲೇಶ್, ಸುಜಾತಾ, ಸಾಂತ್ವನ ಕೇಂದ್ರದ ದುರ್ಗಾ ಗೌಡ, ಸ್ವಾತಿ, ಸುವರ್ಣ ಸೇರಿ ಅಜ್ಜಿಗೆ ಅಗತ್ಯವಿರುವ ಬಟ್ಟೆ ಕೊಡಿಸಿದರು.
