ಶಿರಸಿಯ ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿದ್ದ ಇಬ್ಬರು ನೀರು ಪಾಲಾಗಿದ್ದು, ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಬ್ಬರ ಹುಡುಕಾಟ ಮುಂದುವರೆದಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.
ಶಿರಸಿ ಅರಣ್ಯ ವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಭಾನುವಾರ ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿದ್ದರು. ಅವರೆಲ್ಲರೂ ರಜೆಯ ಮೋಜು ಅನುಭವಿಸುತ್ತಿರುವಾಗ ಶ್ರೀನಿವಾಸ್ ಎಂಬಾತರು ನೀರಿನಲ್ಲಿ ಕಾಲು ತೊಳೆಯಲು ಹೋಗಿ ಅಪಾಯಕ್ಕೆ ಸಿಲುಕಿದರು. ಇದನ್ನು ನೋಡಿದ ಅವರ ಸ್ನೇಹಿತ ರಾಹುಲ್ ತಕ್ಷಣ ಶ್ರೀನಿವಾಸ ಅವರ ರಕ್ಷಣೆಗೆ ದಾವಿಸಿದರು. ಆದರೆ, ಈ ವೇಳೆ ರಾಹುಲ್ ಅವರು ಕಾಲು ಜಾರಿ ನೀರಿಗೆ ಬಿದ್ದರು.
ಆ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಶ್ರೀನಿವಾಸ ಅವರಿಗೆ ಕಲ್ಪಂಡೆಯೊoದು ಬಡಿಯಿತು. ಅದೇ ಬಂಡೆಯನ್ನು ಶ್ರೀನಿವಾಸ ಅವರು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡರು. ಆದರೆ, ಶ್ರೀನಿವಾಸ ಅವರನ್ನು ರಕ್ಷಿಸಲು ತೆರಳಿದ್ದ ರಾಹುಲ್ ಅವರು ಆಯತಪ್ಪಿ ನೀರಿನಲ್ಲಿ ಮುಂದೆ ಸಾಗಿದರು. ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಬೆಣ್ಣೆಹೊಳೆ ಜಲಪಾತಕ್ಕೆ ಆಗಮಿಸಿದರು. ಕಲ್ಪಂಡೆ ಹಿಡಿದುಕೊಂಡಿದ್ದ ಶ್ರೀನಿವಾಸ ಅವರನ್ನು ಹಗ್ಗದ ಸಹಾಯದಿಂದ ಮೇಲೆತ್ತಿದರು.
ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಶ್ರೀನಿವಾಸ ಅವರ ಬೆನ್ನಿನ ಮೂಳೆ ಮುರಿದಿದ್ದು, ಕಂಬಳಿಯಲ್ಲಿ ಅವರನ್ನು ಹಾಕಿ ಆಸ್ಪತ್ರೆಗೆ ಸಾಗಿಸಲಾಯಿತು. ಇದರೊಂದಿಗೆ ಕಾಣೆಯಾದ ರಾಹುಲ್ ಅವರ ಹುಡುಕಾಟವೂ ಮುಂದುವರೆದಿದ್ದು, ರಾತ್ರಿಯಾದರೂ ರಾಹುಲ್ ಅವರು ಸಿಗಲಿಲ್ಲ. ಮಾರಿಕಾಂಬಾ ಲೈಫ್ ಗಾರ್ಡಿನ ಗೋಪಾಲ ಗೌಡ ಅವರು ಈ ವಿಷಯ ತಿಳಿದು ತಮ್ಮ ತಂಡದ ಜೊತೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ರಕ್ಷಣೆಗೆ ಒಳಗಾದ ಶ್ರೀನಿವಾಸ ಅವರು ಹೊಸಪೇಟೆಯವರಾಗಿದ್ದಾರೆ. ಕಾಣೆಯಾದ ರಾಹುಲ್ ಅವರು ಹೂವಿನ ಹಡಗಲಿಯವರಾಗಿದ್ದಾರೆ. ಪಿಐ ಶಶಿಕಾಂತ ವರ್ಮ, ಗ್ರಾಮೀಣ ಠಾಣೆ ಪಿಎಸ್‌ಐ ಅಶೋಕ ರಾತೋಡ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ ಅವರು ಕ್ಷಣ ಕ್ಷಣದ ಮಾಹಿತಿಪಡೆಯುತ್ತಿದ್ದಾರೆ.
Discussion about this post