ಕುಮಟಾದ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಸೇರಿ ಶಿರಸಿಯ ಪವನಕುಮಾರ ನಂದಿಕೇಶ್ವರಮಠ ಅವರಿಗೆ ಯಾಮಾರಿಸಿದ್ದಾರೆ. ಮೀನು ಉದ್ದಿಮೆ ನಡೆಸಿ ಲಾಭ ಕೊಡುವುದಾಗಿ ನಂಬಿಸಿ ಸಂತೋಷ ಹಾಗೂ ಮಂಜುನಾಥ ಅವರು ಪವನಕುಮಾರ ಅವರ ದಾಖಲೆ ಅಡಿ ಕೋಟಿ ರೂ ಸಾಲಪಡೆದಿದ್ದಾರೆ.
ಶಿರಸಿಯ ಬದನಗೋಡ ಬಳಿಯ ದಾಸನಕೊಪ್ಪ ಬಳಿ ಪವನಕುಮಾರ ನಂದಿಕೇಶ್ವರಮಠ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರುವ ಅವರು ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದಾರೆ. ಕುಮಟಾ ತದಡಿಯ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಅವರು ಕಳೆದ 4 ವರ್ಷಗಳಿಂದ ಪವನಕುಮಾರ ನಂದಿಕೇಶ್ವರಮಠ ಅವರ ಪರಿಚಿತರಾಗಿದ್ದು, ಅವರೇ ಇವರಿಗೆ ಮೋಸ ಮಾಡಿದ್ದಾರೆ.
2025ರ ಜನವರಿ ಮೊದಲವಾರ ಶಿರಸಿ ಅಶ್ವಿನಿ ಸರ್ಕಲ್ ಬಳಿಯ ಸ್ಟೇಟ್ ಬ್ಯಾಂಕ್ ಎದುರು ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಅವರು ಪವನಕುಮಾರ ನಂದಿಕೇಶ್ವರಮಠ ಅವರನ್ನು ಭೇಟಿಯಾದರು. `ನಾವೆಲ್ಲರೂ ಸೇರಿ ಹೊಸ ಬ್ಯುಸಿನೆಸ್ ಮಾಡೋಣ’ ಎಂದು ಸಂತೋಷ ಬೇತಾಳಕರ್ ಹೇಳಿದರು. ಉತ್ತಮ ಲಾಭ ಕೊಡುವುದಾಗಿಯೂ ಭರವಸೆ ನೀಡಿದರು. ಇದಕ್ಕೆ ಪವನಕುಮಾರ ನಂದಿಕೇಶ್ವರಮಠ ಸಹ ಒಪ್ಪದರು.
`ನಿಮ್ಮ ಹಕ್ಕಿನ ಚಿರಾಸ್ಥಿಯನ್ನು ಬ್ಯಾಂಕಿಗೆ ಗ್ಯಾರಂಟಿಯಾಗಿ ಕೊಟ್ಟು ಅದರ ಮೂಲಕ ಸಾಲ ತೆಗೆಯೋಣ. ಬ್ಯಾಂಕಿನಿAದ ಹಣಕಾಸು ನೆರವುಪಡೆದು ಮೀನುಗಾರಿಕಾ ಉದ್ದಿಮೆ ನಡೆಸಿ ಲಾಭ ಮಾಡೋಣ’ ಎಂದು ಸಂತೋಷ ಬೇತಾಳಕರ್ ಹೇಳಿದರು. `ಕಾಗದಪತ್ರದ ಎಲ್ಲಾ ಜವಾಬ್ದಾರಿ ನಾನೇ ನೋಡಿಕೊಳ್ಳುವೆ’ ಎಂದರು. ಇದಕ್ಕೂ ಪವನಕುಮಾರ ನಂದಿಕೇಶ್ವರಮಠ ಅವರು ಒಪ್ಪಿಗೆ ಸೂಚಿಸಿದರು.
ಮಾರ್ಚ 2ರಂದು ಸಂತೋಷ ಬೇತಾಳಕರ್ ಅವರು ಅಶ್ವಿನಿ ಸರ್ಕಲ್ ಬಳಿ ಪವನಕುಮಾರ ನಂದಿಕೇಶ್ವರಮಠ ಅವರನ್ನು ಕರೆಯಿಸಿದರು. `ತನ್ನ ಹೆಸರಿನಲ್ಲಿ ಸಾಲ ನೀಡಲು ತಾಂತ್ರಿಕ ತೊಂದರೆ ಇದೆ’ ಎಂದು ನಂಬಿಸಿ ಮಂಜುನಾಥ ಬೇತಾಳಕರ್ ಅವರ ಹೆಸರಿನಲ್ಲಿ 2.90 ಕೋಟಿ ರೂ ಸಾಲ ಮಂಜೂರಿ ಮಾಡಿಸಿದರು. ಮೊದ ಮೊದಲು ತುಂಬಾ ಸೌಜನ್ಯದಿಂದ ವರ್ತಿಸಿದ ಸಂತೋಷ ಬೇತಾಳಕರ್ ಹಾಗೂ ಮಂಜುನಾಥ ಬೇತಾಳಕರ್ ಕ್ರಮೇಣ ಪವನಕುಮಾರ ನಂದಿಕೇಶ್ವರಮಠ ಅವರನ್ನು ಉದಾಸೀನದಿಂದ ನೋಡಿದರು.
ಎಷ್ಟೇ ಪ್ರಶ್ನಿಸಿದರೂ ಯೋಜನೆ ಬಗ್ಗೆ ಯಾವ ಮಾಹಿತಿಯನ್ನು ಕೊಡಲಿಲ್ಲ. ಕೇಳಿದಾಗ ಸಿಡಿಮಿಡಿಗೊಂಡು ಕೋಪದಿಂದ ಮಾತನಾಡಲು ಶುರು ಮಾಡಿದರು. ಜುಲೈ 22ರಂದು ಮಧ್ಯಾಹ್ನ ಹೊಟೇಲ್ ಪಂಚವಟಿಯಲ್ಲಿ ಈ ಮೂವರು ಸೇರಿ ಮಾತುಕಥೆ ನಡೆಸಿದರು. ತಾವು ನೀಡಿದ ದಾಖಲೆ ಕೊಟ್ಟು ಜಾಮೀನು ರದ್ದು ಮಾಡುವಂತೆ ಪವನಕುಮಾರ ನಂದಿಕೇಶ್ವರಮಠ ಕೇಳಿದರು. ಆದರೆ, ಸಂತೋಷ ಬೇತಾಳಕರ್ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ತಮಗೆ ನಂಬಿಕೆ ದ್ರೋಹ ಆಗಿರುವ ಬಗ್ಗೆ ಪವನಕುಮಾರ ನಂದಿಕೇಶ್ವರಮಠ ಅವರು ಪೊಲೀಸ್ ದೂರು ನೀಡಿದರು. ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post