ಶಿರಸಿಯಲ್ಲಿ ಹೊಟೇಲ್ ನಡೆಸುವ ನಜೀರ್ ಕಾಗಲಕರ್ ಅವರು ತಮ್ಮ ಹೊಟೇಲಿಗೆ ಬಂದ ಹಸನ ಸಾಹೇಬ ಅವರ ಮೈಮೇಲೆ ಸಾಂಬಾರು ಎರಚಿದ್ದಾರೆ. ಇದಕ್ಕೆ ಪ್ರತಿಯಾಗಿ ಹಸನ ಸಾಹೇಬ ಅವರು ನಜೀರ್ ಕಾಗಲಕರ್ ಅವರ ಕಪಾಳಕ್ಕೆ ಬಾರಿಸಿದ್ದಾರೆ!
ಶಿರಸಿ ಇಂದಿರಾನಗರದ ನೂರಾನಿ ಮಸೀದಿ ಬಳಿಯ ನಜೀರ್ ಕಾಗಲಕರ್ ಅವರು ಹುಬ್ಬಳ್ಳಿ ರಸ್ತೆಯ ಕೋಟೆಕರೆ ಸರ್ಕಲಿನಲ್ಲಿ ಅರ್ಮನ್ ಹೊಟೇಲ್ ನಡೆಸುತ್ತಾರೆ. ಸಿದ್ದಾಪುರದ ಹರೂರಿನ ಹಸನ ಸಾಹೇಬ ಅವರು ವ್ಯವಹಾರ ನಡೆಸುತ್ತಾರೆ. ಅವರಿಬ್ಬರ ನಡುವೆ ಸೆಪ್ಟೆಂಬರ್ 6ರ ಸಂಜೆ ಅರ್ಮನ್ ಹೊಟೇಲಿನಲ್ಲಿ ಜಟಾಪಟಿ ನಡೆದಿದೆ.
ಸಂಜೆ 6.30ರ ವೇಳೆಗೆ ಹಸನ ಸಾಹೇಬ ಅವರು ಹೊಟೇಲ್ ಒಳಗೆ ಪ್ರವೇಶಿಸಿದರು. ಆಗ, ನಜೀರ್ ಕಾಗಲಕರ್ ಅವರು ಅಲ್ಲಿ ಗ್ರಾಹಕರಿಗೆ ಆಹಾರ ಸರಬರಾಜು ಮಾಡುತ್ತಿದ್ದರು. ಹಸನ ಸಾಹೇಬ ಅವರು ತಮ್ಮ ಹುಡುಗರು ನೀಡಿದ ದುಡ್ಡಿನ ವಿಷಯದ ಬಗ್ಗೆ ಪ್ರಶ್ನಿಸಿದರು. ಇದರಿಂದ ನಜೀರ್ ಕಾಗಲಕರ್ ಅವರು ಸಿಟ್ಟಾದರು. ತಮ್ಮ ಕೈಯಲ್ಲಿದ್ದ ಬಿಸಿ ಬಿಸಿ ಸಾಂಬಾರನ್ನು ಹಸನ ಸಾಹೇಬ್ ಅವರ ಮೇಲೆ ಸುರಿದರು. ಆಗ, ಹಸನ ಸಾಬ್ ಅವರು ನಜೀತ್ ಕಾಗಾಲಕರ್ ಅವರ ಕೆನ್ನೆಗೆ ಬಾರಿಸಿದರು. ನಜೀರ್ ಅವರು ಅಷ್ಟಕ್ಕೆ ಸುಮ್ಮನಾಗದೇ ಹಸನ ಸಾಹೇಬ್ ಅವರ ಎದೆಗೆ ಬಾಯಿ ಹಾಕಿ ಕಚ್ಚಿ ಗಾಯಗೊಳಿಸಿದರು.
ಹೊಟೇಲಿನೊಳಗಿದ್ದ ಜನ ಅವರಿಬ್ಬರ ಹೊಡೆದಾಟ ತಪ್ಪಿಸಿದರು. ಹಸನ ಸಾಹೇಬ ಅವರ ಪತ್ನಿಗೂ ಈ ವೇಳೆ ಪೆಟ್ಟಾಗಿದ್ದು, ಅವರು ಪಂಡಿತ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದರು. ಅದಾದ ನಂತರ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಬಂದು ಹಸನ ಸಾಹೇಬ್ ಅವರು ದೂರು ನೀಡಿದರು. ಹೊಟೇಲಿಗೆ ಬಂದು ಅನಗತ್ಯ ಗಲಾಟೆ ಮಾಡಿದ ಕಾರಣ ಹಸನ ಸಾಹೇಬ್ ವಿರುದ್ಧವೂ ನಜೀರ್ ಕಾಗಾಲಕರ್ ಅವರು ದೂರು ನೀಡಿದರು. ಪೊಲೀಸರು ಎರಡು ಕಡೆಯವರ ಅಳಲು ಆಲಿಸಿ ಪ್ರಕರಣ ದಾಖಲಿಸಿದರು.
Discussion about this post