ಒಂದೇ ಹುಡುಗಿಯನ್ನು ಕಾಣಿಸಿ ಬೇರೆ ಬೇರೆ ಯುವಕರಿಗೆ ಮದುವೆ ಮಾಡಿ ಲಕ್ಷಾಂತರ ರೂ ದೋಚುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಅದರ ಮುಂದುವರೆದ ಭಾಗವಾಗಿ ಇದೀಗ AI ತಂತ್ರಜ್ಞಾನದಲ್ಲಿ ಹುಡುಗಿಯರ ಫೋಟೋ ಸಿದ್ಧಪಡಿಸಿ ವಂಚಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ವಿವಿಧ ಚಿತ್ರಗಳನ್ನು ಸಿದ್ಧಪಡಿಸಿ ಶಿರಸಿ-ಹೊನ್ನಾವರ ಭಾಗದ ಹುಡುಗಿ ಎಂದು ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ.
ಜನಪ್ರಿಯ ಜಾಲತಾಣಗಳಲ್ಲಿ ಫೇಕು ಅಕೊಂಟುಗಳ ಸಂಖ್ಯೆ ಹೆಚ್ಚಾಗಿದೆ. ಅದರೊಂದಿಗೆ AI ಮೂಲಕ ಇಲ್ಲಿ ಹುಡುಗಿಯರನ್ನು ಹುಟ್ಟಿಸಲಾಗುತ್ತಿದೆ. ಆ ಹುಡುಗಿಯರಿಗೆ ವಿದ್ಯಾ, ರಾಶಿ, ನವ್ಯಾ, ಮೇಘನಾ ಎಂದು ನಾಮಕರಣ ಮಾಡಲಾಗುತ್ತಿದ್ದು, ಅವರ ಫೋಟೋಗಳನ್ನು ಹರಿಬಿಡಲಾಗುತ್ತಿದೆ. ಅನೇಕರು ಆ ನಕಲಿ ಹುಡುಗಿಯರ ಫೋಟೋಗಳನ್ನು ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದಾರೆ!
ಹಲವರು ಆ ಫೋಟೋಗಳನ್ನು ನೋಡಿ ಜಾಲತಾಣಗಳ ಮೂಲಕವೇ ಮದುವೆಯ ಪ್ರಸ್ತಾಪ ಮಾಡುತ್ತಿದ್ದಾರೆ. ಪ್ರತಿ ಫೋಟೋಗಳು ಹತ್ತಾರು ಸಂಖ್ಯೆಯಲ್ಲಿ ಶೇರ್ ಹಾಗೂ ಸಾವಿರ ಸಂಖ್ಯೆಯಲ್ಲಿ ಲೈಕುಗಳಿಂದ ಕೂಡಿದೆ. ಅಷ್ಟೇ ಪ್ರಮಾಣದ ಕಾಮೆಂಟ್ ಸಹ ಬರುತ್ತಿದೆ. ಒಂದೇ ಹುಡುಗಿಯ ಚಿತ್ರಕ್ಕೆ ಬೇರೆ ಬೇರೆ ಊರು ಹಾಗೂ ಬೇರೆ ಬೇರೆ ಹೆಸರಿನ ಜೊತೆ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದರೂ ಜನ ಆ ಬಗ್ಗೆ ಅರಿಯದೇ ತಮ್ಮ ಮೊಬೈಲ್ ಸಂಖ್ಯೆ ಹಂಚಿಕೊಳ್ಳುತ್ತಿದ್ದಾರೆ.
ಯುವ ಸಮುದಾಯದ ಯುವಕರನ್ನು ಗುರಿಯಾಗಿರಿಸಿಕೊಂಡು ಇಂಥ ಪೋಸ್ಟುಗಳನ್ನು ಪ್ರಸಾರ ಮಾಡಲಾಗುತ್ತಿದೆ. 18ರಿಂದ 30 ವಯಸ್ಸಿನ ಕೃತಕ ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ಯುವಕರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಜಾಲತಾಣಗಳಲ್ಲಿ ಹಂಚಿಕೊOಡ ಫೋಟೋಗಳ ಕಮೆಂಟಿನಲ್ಲಿರುವ ಮೊಬೈಲ್ ಸಂಖ್ಯೆಗಳಿಗೆ ವಂಚಕರು ಫೋನ್ ಮಾಡುತ್ತಿದ್ದು, ಆಸೆ-ಆಮೀಷಕ್ಕೆ ಬಲಿಯಾದ ಜನ ಮೋಸ ಹೋಗುತ್ತಿದ್ದಾರೆ.
ಇನ್ನೂ ಕೆಲವರು ಕಮೆಂಟ್ ಬಾಕ್ಸಿನಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.ಇಲ್ಲದ ಹುಡುಗಿಯರನ್ನು ಕೃತಕವಾಗಿ ಸೃಷ್ಠಿಸಿ ಅವರನ್ನು ಬಳಸಿಕೊಂಡು ಜನರನ್ನು ವಂಚಿಸುವುದು ಸೈಬರ್ ಕ್ರೈಂ ಕ್ರಿಮಿಗಳ ಇನ್ನೊಂದು ಆಯಾಮವಾಗಿದೆ.
ಕೆಲವರು ಮಾತ್ರ ಫೋಟೋ ನೋಡಿದ ತಕ್ಷಣ `ಇದು ಅಸಲಿಯಲ್ಲ’ ಎಂದು ಕಮೆಂಟ್ ಮಾಡಿ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ.
Discussion about this post