ಯಲ್ಲಾಪುರದ ಕಿರವತ್ತಿ ಬಳಿಯ ಡೊಮಗೇರಿಯ ಬಳಿ ಅನಾಧಿಕಾಲದಿಂದಲೂ ಮಕ್ಕಳಿಗೆ ಹಣ್ಣುಗಳನ್ನು ನೀಡುತ್ತಿದ್ದ ಅತ್ತಿ ಮರ ತನ್ನ ಮರಣದ ಜೊತೆ ಮತ್ತಿಬ್ಬರು ಮಹಿಳೆಯರ ಜೀವಪಡೆದಿದೆ. ಜೊತೆಗೆ ಇನ್ನೂ ಬ್ರೂಣಾವಸ್ಥೆಯಲ್ಲಿದ್ದ ಕಂದಮ್ಮನನ್ನು ಆ ಮರ ಬಲಿಪಡೆದಿದೆ.
ಭಾನುವಾರದ ರಜೆ ಮುಗಿಸಿದ್ದ ಡೊಮಗೇರಿಯ ಮಕ್ಕಳು ಸೋಮವಾರ ಬೆಳಗ್ಗೆ ಖುಷಿಯಿಂದ ಅಂಗನವಾಡಿಗೆ ಹೋಗಿದ್ದರು. ಅಂಗನವಾಡಿಗೆ ಹೋಗಿದ್ದ ಮಕ್ಕಳನ್ನು ಮನೆಗೆ ಕರೆ ತರಲು ಗರ್ಭಿಣಿ ಸಾವಿತ್ರಿ ಖಾರತ್ ಹೋಗಿದ್ದರು. ಮರದ ಅಡಿ ಸಿಲುಕಿ ಸಾವಿತ್ರಿ ಖಾರತ್ ಅಲ್ಲಿಯೇ ಸಾವನಪ್ಪಿದರು. ಸಾವಿತ್ರಿ ಖಾರತ್ ಅವರಿಗೆ ಜೀವವಿರಬಹುದು ಎಂದು ಅಂದಾಜಿಸಿ ಮರ ಕಟಾವು ಮಾಡಿದರೂ ಅದರಿಂದ ಪ್ರಯೋಜನ ಆಗಲಿಲ್ಲ.
ಈ ದುರಂತದಲ್ಲಿ ಸಾವಿತ್ರಿ ಅವರ ಜೊತೆಗಿದ್ದ ಸ್ವಾತಿ ಖರಾತ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ತುರ್ತಾಗಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಆದರೆ, ಕಿರವತ್ತಿ ಬಳಿ ಆಂಬುಲೆನ್ಸಿನಲ್ಲಿಯೇ ಅವರು ಕೊನೆಯುಸಿರೆಳೆದರು. ಇನ್ನೂ ಬಾಳಿ ಬದುಕಬೇಕಿದ್ದ 17 ವರ್ಷದ ಸ್ವಾತಿ ಖರಾತ್ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆಂಬುಲೆನ್ಸನಲ್ಲಿಯೇ ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅದ್ಯಾವುದರಿಂದಲೂ ಸ್ವಾತಿ ಖರಾತ್ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಮುರಿದು ಬಿದ್ದ ಮರ ನೂರಾರು ವರ್ಷಗಳಿಂದ ಡೊಮಗೇರಿಯಲ್ಲಿದ್ದು ಅನೇಕರಿಗೆ ನೆರಳು ನೀಡಿತ್ತು. ಮಕ್ಕಳಿಗೆ ಹಣ್ಣುಗಳನ್ನು ಕೊಡುತ್ತಿತ್ತು. ಈ ಮರದಲ್ಲಿ ಕಳೆದ ಬಾರಿಯೂ ಬಾರೀ ಪ್ರಮಾಣದ ಹಣ್ಣುಗಳಿದ್ದವು. ಮರದ ಕೆಲ ರೆಂಬೆ-ಕೊoಬೆಗಳು ಒಣಗಿದ್ದರೂ ಅದನ್ನು ಕಟಾವು ಮಾಡಿರಲಿಲ್ಲ. ಮರ ಮುರಿದು ಬೀಳುವ ನಿರೀಕ್ಷೆಯೂ ಯಾರಿಗೂ ಇರಲಿಲ್ಲ.
