ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗಾಂಜಾ ವ್ಯಾಪಾರ ಜೋರಾಗಿದೆ. ಬೇರೆ ಬೇರೆ ಊರಿನ ಜನ ಇಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಮಾರಾಟ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಹುತೇಕರು ವಿದ್ಯಾರ್ಥಿಗಳೇ ಆಗಿದ್ದಾರೆ. ದಾಖಲೆಗಳ ಶೋಧ ನಡೆಸಿದಾಗ ಹುಬ್ಬಳ್ಳಿ, ಹಾವೇರಿ, ಮಂಗಳೂರು ಹಾಗೂ ಗೋವಾ ಭಾಗದಿಂದ ಉತ್ತರ ಕನ್ನಡ ಜಿಲ್ಲೆಗೆ ಮಾದಕ ವಸ್ತು ಆಗಮಿಸುತ್ತಿರುವುದು ಗೊತ್ತಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಪೊಲೀಸರು ಗಾಂಜಾ ವಿರುದ್ಧ ಹೋರಾಟ ನಡೆಸಿದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷಕ್ಕಿಂತಲೂ ಈ ವರ್ಷ ಗಾಂಜಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರದೇಶಗಳ ಜೊತೆ ಗ್ರಾಮೀಣ ಭಾಗಗಳಿಗೂ ಗಾಂಜಾ ಘಾಟು ತಲುಪಿದೆ. ಗಾಂಜಾ ಮತ್ತಿನಲ್ಲಿರುವವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪ್ರಕರಣ ದಾಖಲಿಸುತ್ತಿದ್ದು, ಅನೇಕ ಬಾರಿ ಗಾಂಜಾ ವ್ಯಾಪಾರಿಗಳು ಸಹ ಸಿಕ್ಕಿ ಬಿದ್ದಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಥವಾ ರಸ್ತೆ ಬದಿ ಕೆಲ ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವುದು ಈಚೆಗೆ ಸಾಮಾನ್ಯವಾಗಿದೆ. ಕಾಡಂಚಿನ ರಸ್ತೆಯಲ್ಲಿ ಕಾಯುವ ಯುವಕರು ಗಾಂಜಾ ವ್ಯವಹಾರದಲ್ಲಿ ತೊಡಗಿರುವುದು ಆಗಾಗ ದೃಢವಾಗುತ್ತಿದೆ. ಗಾಂಜಾ ಪ್ರಕರಣದಲ್ಲಿ ಸಿಕ್ಕಿ ಬೀಳುವವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಅದಾಗಿಯೂ ಗಾಂಜಾ ಸಾಗಾಟ ಹಾಗೂ ಸೇವನೆಗೆ ಕಡಿವಾಣ ಬಿದ್ದಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲಿನ ಪ್ರಮಾಣದಲ್ಲಿ ಗಾಂಜಾ ಬೆಳೆಯುವ ಪ್ರದೇಶಗಳಿಲ್ಲ. ಇಲ್ಲಿನ ಮಣ್ಣಿನ ಗುಣಕ್ಕೆ ಗಾಂಜಾ ಸರಿಯಾಗಿ ಬರುವುದೂ ಇಲ್ಲ. ಹೀಗಾಗಿ ಬೇರೆ ಬೇರೆ ಭಾಗದಿಂದಲೇ ಇಲ್ಲಿ ಗಾಂಜಾ ಸರಬರಾಜಾಗುತ್ತಿದ್ದು, ಹೊರ ಜಿಲ್ಲೆಯ ವ್ಯಕ್ತಿಗಳ ಜೊತೆ ಜಿಲ್ಲೆಯವರು ಈ ದಂಧೆಯಲ್ಲಿ ಕೈ ಜೋಡಿಸಿದ್ದಾರೆ. ಗಾಂಜಾ ಸಾಗಾಟ ಪ್ರಕರಣದಲ್ಲಿ ಬಹುತೇಕ ಹೊರಗಿನವೇ ಸಿಕ್ಕಿ ಬಿದ್ದಿದ್ದು, ಸೇವನೆ ಪ್ರಕರಣದಲ್ಲಿ ಜಿಲ್ಲೆಯವರು ಕಾನೂನು ಕ್ರಮ ಎದುರಿಸುತ್ತಿದ್ದಾರೆ.
ಸಾಮಾನ್ಯವಾಗಿ 50-100 ಗ್ರಾಂ ಪ್ಯಾಕೇಟ್ ಮಾಡಿ ಗಾಂಜಾ ಮಾರಾಟ ನಡೆಯುತ್ತಿದೆ. ಸಾರ್ವಜನಿಕ ಬಸ್ಸು ಹಾಗೂ ಇನ್ನಿತರ ವಾಹನಗಳ ಮೂಲಕವೇ ಗಾಂಜಾ ಸರಬರಾಜು ಆಗುತ್ತಿದೆ. ಬೇರೆ ಕಡೆಯಿಂದ ಬರುವವರು ದೊಡ್ಡ ಪ್ರಮಾಣದಲ್ಲಿ ಗಾಂಜಾ ತಂದು ಇಲ್ಲಿನವರಿಗೆ ಪೂರೈಸಿ ಒಂದೇ ದಿನದಲ್ಲಿ 8-10 ಸಾವಿರ ರೂ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಗಾಂಜಾ ಸಾಗಾಟಗಾರರು ಸಣ್ಣ ಸಣ್ಣ ಪ್ಯಾಕೇಟ್ ಮೂಲಕ ಅದನ್ನು ವ್ಯಸನಿಗಳಿಗೆ ಇನ್ನಷ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 2025ನೇ ಇಸ್ವಿಯಲ್ಲಿ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 175 ಗಾಂಜಾ ವ್ಯಾಪಾರಿಗಳನ್ನು ಪೊಲೀಸರು ಹಿಡಿದಿದ್ದಾರೆ. ಅಂಥವರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ದಾಖಲಿಸಿದ್ದಾರೆ.
`ಮಾದಕ ವ್ಯಸನದ ವಿರುದ್ಧ ಜನ ಜಾಗೃತಿಯೊಂದೇ ಪರಿಹಾರ’ ಎಂದು ಕಂಡುಕೊAಡಿರುವ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ನಿಟ್ಟಿನಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇಲ್ಲಿನ ಪೊಲೀಸರು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಶಾಲಾ-ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗುತ್ತಿದ್ದು, `ಇಂಥ ಕಾನೂನುಬಾಹಿರ ಚಟುವಟಿಕೆಯಲ್ಲಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಖಚಿತ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ದಿನ ಎಚ್ಚರಿಸಿದ್ದಾರೆ.
