`ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೀಡಾಡಿ ದನಗಳಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಜರುಗಿಸಿ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ ಸೂಚಿಸಿದ್ದಾರೆ. `ರಾತ್ರಿಯ ವೇಳೆಯಲ್ಲಿ ಹೆದ್ದಾರಿ ಗಸ್ತು ವಾಹನದ ಮೂಲಕ ಬೀಡಾದಿ ದನಗಳನ್ನು ಹೆದ್ದಾರಿಯಿಂದ ಸುರಕ್ಷಿತ ಸ್ಥಳಗಳಿಗೆ ಓಡಿಸಲು ಕ್ರಮ ಕೈಗೊಳ್ಳಬೇಕು. ಹೆದ್ದಾರಿಯಲ್ಲಿ ವಾಹನಗಳಿಂದ ಅಪಘಾತವಾಗಿ ನರಳುವ ದನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಅವರು ನಿರ್ದೇಶನ ನೀಡಿದ್ದಾರೆ.
ಕಾರವಾರದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಭಟ್ಕಳದಿಂದ ಮಾಜಾಳಿವರೆಗಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಕಂಡು ಬರುವ ಬೀಡಾಡಿ ದನಗಳಿಂದ ಹೆಚ್ಚಿನ ಸಂಖ್ಯೆಯ ವಾಹನ ಅಪಘಾತಗಳು ಸಂಭವಿಸುತ್ತಿದೆ. ಈ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಜರುಗಿಸಿ’ ಎಂದು ಸೂಚಿದರು. ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಪ್ರಮುಖ ಜವಾಬ್ದಾರರು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ. `ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭಟ್ಕಳ-ಮುರುಡೇಶ್ವರ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ರಕ್ಷಣೆಗೆ ಗೋಶಾಲೆ ನಿರ್ಮಿಸಿ. ಅದನ್ನು ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಮತ್ತು ಕಣಸಗಿರಿಯಲ್ಲಿ ಈಗಾಗಲೆ ತೆರದಿರುವ ಗೋಶಾಲೆಯ ಸಂಪೂರ್ಣ ನಿರ್ವಹಣೆಯನ್ನು ನೋಡಿಕೊಳ್ಳಿ’ ಎಂದು ಸೂಚಿಸಿದರು. `ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಪೊಲೀಸ್ ಇಲಾಖೆಯ ಮೂಲಕ ಗುರುತಿಸಬೇಕು. ಅಪಘಾತ ಸಂದರ್ಭದಲ್ಲಿ ಆ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲವಾಗುವಂತೆ ಸಮೀಪದ ಪ್ರದೇಶದಲ್ಲಿ ತಮ್ಮ ಆಂಬುಲೆನ್ಸ್ ನಿಯೋಜಿಸಬೇಕು’ ಎಂದವರು ಸೂಚಿಸಿದರು.
`ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸೂಚಿಸುವ ಸ್ಥಳಗಳಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಬೇಕು. ರಂಬ್ರ‍್ಸ್ಗಳು, ಸ್ಪೀಡ್ ಬ್ರೇಕರ್‌ಗಳು, ಕ್ಯಾಮೆರಾಗಳನ್ನ್ನು ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು. `ಅಂಕೋಲದಿoದ ಯಲ್ಲಾಪುರ ಹೋಗುವ ರಸ್ತೆಯು ತುಂಬಾ ಹಾಳಾಗಿದ್ದು ಇಲ್ಲಿನ ರಸ್ತೆ ದುರವಸ್ಥೆ ಬಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ದೂರುಗಳು ಬರುತ್ತಿದೆ. ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಕೂಡಲೇ ಇಲ್ಲಿನ ರಸ್ತೆಗಳಲ್ಲಿನ ಪಾಟ್ ಹೋಲ್‌ಗಳನ್ನು ಹಾಗೂ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿನ ಪಾಟ್ ಹೋಲ್ ಗಳನ್ನು ಮುಚ್ಚಲು ಕ್ರಮ ಜರುಗಿಸಬೇಕು’ ಎಂದವರು ಹೇಳಿದ್ದಾರೆ. ಈ ವೇಳೆ ಶಿರಸಿ-ಕುಮಟಾ ರಸ್ತೆ ಕಾಮಗಾರಿಯನ್ನು ಅವಧಿಯೊಳಗೆ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚಿಸಿದರು.
ರಾಷ್ಟಿಯ ಮತ್ತು ರಾಜ್ಯ ಹೆದ್ದಾರಿಯಲ್ಲಿ ಬೀಡಾಡಿ ದನಗಳಿಂದ ಅಪಘಾತವಾಗುವುದನ್ನು ತಡೆಯಲು ಅವುಗಳ ಕುತ್ತಿಗೆಗೆ ರೇಡಿಯಂ ಕಾಲರ್ ಅಳವಡಿಕೆ, ಕೊಂಬುಗಳಿಗೆ ರೇಡಿಯಂ ಅಳವಡಿಕೆ ಕುರಿತಂತೆ ಹಾಗೂ ಇವುಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್.ಅಧಿಕಾರಿ ಝೂಫಿಷಾನ್ ಹಕ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Discussion about this post