ಸೈಬರ್ ಕ್ರೈಂ ಪ್ರಪಂಚ ದಿನದಿಂದ ದಿನಕ್ಕೆ ರಕ್ಕಸ ವೇಗದಲ್ಲಿ ಬೆಳೆಯುತ್ತಿದೆ. ಪೊಲೀಸರು, ಸೈಬರ್ ಸೆಕ್ಯುರಿಟಿ ತಜ್ಞರು ಒಂದು ಅಪರಾಧ ಪ್ರಮಾಣ ತಗ್ಗಿಸುವಷ್ಟರಲ್ಲಿ ಈ ಸೈಬರ್ ಕ್ರಿಮಿಗಳು ಮತ್ತಷ್ಟು ಹೊಸ ಅಪರಾಧಗಳನ್ನು ಸೃಷ್ಠಿಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಮತ್ತೊಂದು ಮುಖವಾಡ ತೊಟ್ಟು ಸೈಬರ್ ಕ್ರಿಮಿಗಳು ನಮ್ಮ-ನಿಮ್ಮ ಎದುರು ಬಂದು ನಿಂತಾಗಿದೆ. ಎಚ್ಚರಿಸುವುದಷ್ಟೇ ನಮ್ಮ ಕೆಲಸ!
ಈಗೇನು, ಹೆಚ್ಚಿನವರು ತಮ್ಮ ಸ್ಮಾರ್ಟ್ಫೋನ್‌ನಲ್ಲಿ ಗೂಗಲ್ ಪೇ, ಫೋನ್‌ಪೇನಂತಹ ಸರಳ ಹಣ ವರ್ಗಾಯಿಸುವ ಅಪ್ಲಿಕೇಶನ್ ಇಳಿಸಿ, ಬಳಸುತ್ತಿದ್ದಾರೆ. ಪ್ರತಿಯೊಂದು ವರ್ಗಾವಣೆಗೂ ಎಂಪಿನ್ ಅಥವಾ ಓಟಿಪಿ ಅತ್ಯಗತ್ಯ ಅನ್ನುವುದು ನಿಮಗೂ ಗೊತ್ತಲ್ಲ? ಆದರೆ, ನಿಮ್ಮ ಅಕೌಂಟ್‌ನಲ್ಲಿರುವ ಹಣ ವರ್ಗಾವಣೆಗೆ ಇದ್ಯಾವುದೂ ಅಗತ್ಯವೇ ಇಲ್ಲ ಎಂದರೆ ನಂಬುತ್ತೀರಾ? ನಂಬಲೇಬೇಕು. ಯಾಕೆಂದರೆ, ಯಾಮಾರುವ ಜನ ನಮ್ಮಲ್ಲಿನ್ನೂ ಇದ್ದಾರಲ್ಲ?! ಅರೆರೆ, ಓಟಿಪಿ ಇಲ್ಲದೇ ಅದ್ಹೇಗೆ ಹಣ ವರ್ಗಾಯಿಸಿಕೊಳ್ತಾರೆ ಅನ್ನುವುದು ನಿಮ್ಮ ಸಂಶಯವಿದ್ದರೆ ಮುಂದೆ ಓದಿ..
ಆನ್‌ಲೈನ್‌ನಲ್ಲಿ ಇದೀಗ ಹೊಸದೊಂದು ಮೋಸದ ಜಾಲ ಹುಟ್ಟಿಕೊಂಡಿದೆ. ಈ ಹಿಂದಿನದ್ದಕ್ಕಿOತ ತುಸು ಭಿನ್ನವಾಗಿದೆ. ಆದರೆ, ವಿಧಾನ ಅದೇ. ಫಿಶಿಂಗ್! ಸುಮ್ಮನೇ ಗಾಳ ಎಸೆದು ಯಾವ ಮೀನು ಸಿಲುಕಿಕೊಳ್ಳುತ್ತದೆಯೋ ಅದನ್ನು ಎಳೆದುಕೊಳ್ಳುವುದೇ ಈ ದಂಧೆ. ಅರ್ಥವಾಗುವಂತೆ, ಸರಳವಾಗಿ ಹೇಳಬೇಕೆಂದರೆ, ನಿಮ್ಮ ಬ್ಯಾಂಕ್ ಅಕೌಂಟ್‌ನ ಲೋಗೋವನ್ನು ಬಳಸಿಕೊಂಡು ನಿಮಗೊಂದು ಲಿಂಕ್ ಕಳುಹಿಸುತ್ತಾರೆ. ವಾಟ್ಸಾಪ್ ಅಥವಾ ಮೆಸೇಜ್ ರೂಪದಲ್ಲಿ ಬರುವ ಈ ಲಿಂಕ್ ಕ್ಲಿಕ್ ಮಾಡಿ `ನಿಮ್ಮ ಬ್ಯಾಂಕ್ ಅಕೌಂಟ್ ಅಪ್‌ಡೇಟ್ ಮಾಡಬೇಕಿದೆ, ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ನವೀಕರಿಸಬೇಕಿದೆ. ಇಲ್ಲವಾದಲ್ಲಿ ನಿಮ್ಮ ಅಕೌಂಟ್ ಬ್ಲಾಕ್ ಆಗಲಿದೆ. ಇದನ್ನು ತಪ್ಪಿಸಲು ಕೆಳಗಿನ ಲಿಂಕ್ ಒತ್ತಿ’ ಎಂದು ಮೆಸೆಜ್ ಬರುತ್ತದೆ.
ಅಷ್ಟೇ ಅಲ್ಲ, `ವಿದ್ಯುತ್ ಬಿಲ್ ತುಂಬುವಾಗ ಶೇ 25 ರಿಯಾಯಿತಿ ಪಡೆಯಬೇಕೆಂದರೆ ಈ ಕೆಳಗಿನ ಲಿಂಕ್ ಒತ್ತಿ ಎಂಬ ಮೆಸೇನ್ ಇನ್ನೊಂದು ಸ್ವರೂಪದ್ದು. ಯಾವುದೋ ಅಚಾತುರ್ಯದಿಂದ ಈ ಮೆಸೇಜ್ ನಂಬಿ ಕ್ಲಿಕ್ ಮಾಡಿದರೆ ಕಥೆ ಮುಗಿಯಿತು ಎಂದೇ ಅರ್ಥ. ಯಾಕೆಂದರೆ, ಈ ಹಿಂದಿನAತೆ ಯಾವುದೋ ವೆಬ್‌ಸೈಟ್ ದಾರಿ ತೋರಿಸುವ ಲಿಂಕ್ ಇದಲ್ಲ. ಬ್ಯಾಂಕಿನ ಹೆಸರಿನಲ್ಲಿ ಬರುವ ಅಂಥ ಲಿಂಕ್ ಒತ್ತಿದರೆ ನೇರವಾಗಿ ಈ ಕ್ರಿಮಿನಲ್‌ಗಳು ತಯಾರಿಸಿದ ಅಪ್ಲಿಕೇಶನ್ ನಿಮ್ಮ ಮೊಬೈಲ್‌ನ ಯಾವುದೋ ಮೂಲೆಯಲ್ಲಿ ಸ್ಥಾಪನೆಯಾಗಿರುತ್ತದೆ. ನೆನಪಿರಲಿ, ಇಂತಹ ಎಷ್ಟೋ ಅಪ್ಲಿಕೇಶನ್‌ಗಳು ಹಿಡನ್ ಆಗಿದ್ದು, ಎಲ್ಲಿಯೂ ಕಾಣುವುದೇ ಇಲ್ಲ ಮತ್ತು ಮತ್ತೆ ತೆಗೆದುಹಾಕಲೂ ಸಾಧ್ಯವಿಲ್ಲ!
ಮುಂದೇನಾದೀತು? ಆಗ, ಹಣ ವರ್ಗಾವಣೆಗೆ ಯಾವುದೇ ಓಟಿಪಿ ಬರುವುದಿಲ್ಲ. ನಿಮ್ಮ ಬ್ಯಾಂಕ್‌ನಿAದ ಈ ಬಗ್ಗೆ ಮೆಸೇಜ್ ಕೂಡಬರುವುದಿಲ್ಲ. ಅವೆಲ್ಲವೂ ತೆರೆಯ ಹಿಂದಿರುವ ಸೈಬರ್ ಕ್ರಿಮಿಗಳ ಕೈ ಸೇರಿರುತ್ತದೆ ಮತ್ತು, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಿರುತ್ತದೆ. ಮತ್ತೆ, ಇದರಿಂದ ಬಚಾವಾಗುವುದು ಹೇಗೆ? ಎಂದಿನOತೆ ನಿರ್ಲಕ್ಷಿಸುವುದು ಒಂದು ದಾರಿ. ಸುಳ್ಳೇ ಸುಳ್ಳು ಆಮಿಷಕ್ಕೆ ಬಲಿ ಬೀಳದಿರುವುದು ಇನ್ನೊಂದು ದಾರಿ.
ಈಗಾಗಲೇ ಆ ಅಪ್ಲಿಕೇನ್ ಡೌನ್‌ಲೋಡ್ ಆಗಿದೆ ಎಂದಾದರೆ ಏನು ಮಾಡುವುದು? ಡೌನ್‌ಲೋಡ್ ಮ್ಯಾನೇಜರ್ ತೆರೆದು ಯಾವುದಾದರೂ ಹೊಸ ಅಪ್ಲಿಕೇಶನ್ ಡೌನ್‌ಲೋಡ್ ಆಗುತ್ತಿದ್ದರೆ ಅದನ್ನು ಅಲ್ಲಿಗೇ ನಿಲ್ಲಿಸಿ ಮತ್ತು ರಿಮೂವ್ ಮಾಡಿ. ಕೂಡಲೇ *#67# ನಂಬರನ್ನು ಡಯಲ್ ಮಾಡಿ. ಇದರಲ್ಲಿ ನಿಮ್ಮ ಮೊಬೈಲ್ ನಂಬರ್‌ನ ಕಾಲ್ ಅಥವಾ ಮೆಸೇಜ್‌ಗಳು ಬೇರೆ ಸಂಖ್ಯೆಗೆ ವರ್ಗಾಯಿಸಲ್ಪಟ್ಟಿದ್ದರೆ ತಿಳಿದುಕೊಳ್ಳಬಹುದು. ನಿಮಗೆ ಗೊತ್ತೇ ಇಲ್ಲದ ಅಥವಾ ನೀವು ಎಂದೂ ಸೆಟ್ ಮಾಡಿರದ ಸಂಖ್ಯೆಗೆ ಫಾರ್ವರ್ಡ್ ಆಗಿದ್ದರೆ ನಿಮ್ಮ ಫೋನ್ ಸೈಬರ್ ವಂಚಕರ ಕೈಸೇರುತ್ತಿದೆ ಎಂದರ್ಥ. ಹಾಗೇನಾದರೂ ಆಗಿದ್ದಲ್ಲ, ಕೂಡಲೇ #002# ನಂಬರ್ ಡಯಲ್ ಮಾಡಿದರೆ ಎಲ್ಲಾ ಸರ್ವಿಸ್‌ಗಳು ಡಿಸೇಬಲ್ ಆಗುತ್ತವೆ. ಆಗ ಬೀಸುವ ದೊಣ್ಣೆಯಿಂದ ಒಮ್ಮೆ ತಪ್ಪಿಸಿಕೊಳ್ಳಬಹುದು. ನೆನಪಿಡಿ, ಇವೆಲ್ಲ ಹಂತಗಳು ತಕ್ಷಣವೇ ಮಾಡಿದರಷ್ಟೇ ಪ್ರಯೋಜನಕಾರಿ.
ನೆನಪಿಡಿ, ಯಾವುದೇ ಬ್ಯಾಂಕ್‌ನವರು ಫೋನ್/ಅಪ್ಲಿಕೇಶನ್‌ಗಳ ಮುಖಾಂತರ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಅಕೌಂಟ್ ವಿವರಗಳನ್ನು ಕೇಳುವುದಿಲ್ಲ. ಕೆವೈಸಿ ಅಪ್ಡೇಟ್ ಮಾಡಿ ಎನ್ನುವುದಿಲ್ಲ. ಇದರ ಹೊರತಾಗಿ, ಯಾವುದೇ ಕೆಲಸಕ್ಕೆ ಬಾರದ ಸುಳ್ಳೇಸುಳ್ಳು ಆಫರ್‌ಗಳ ಲಿಂಕ್‌ಗಳನ್ನು ಒತ್ತಬೇಡಿ. ಬೇರೆಯವರಿಗೆ ಕಳಿಸಲೂಬೇಡಿ. ಅಗತ್ಯ ಬಿದ್ದರೆ ಯಾವುದೇ ಮಾಹಿತಿ ಬೇಕಿದ್ದರೂ ನಿಮ್ಮ ಅಕೌಂಟ್ ಇರುವ ಬ್ಯಾಂಕ್‌ಗೆ ಖುದ್ದಾಗಿ ತೆರಳಿ ವಿಚಾರಿಸಿ. ಅಕೌಂಟ್ ನಂಬರ್, ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಫೋನ್‌ನಲ್ಲಿ ಹಂಚಿಕೊಳ್ಳಬೇಡಿ. ಅಷ್ಟೇ ಏಕೆ, ನಿಮ್ಮದೇ ಖಾತೆಯಿರುವ ಬ್ಯಾಂಕ್ ಶಾಖೆಯ ಸಿಬ್ಬಿಂದಿ ಎಂದೇ ಫೋನ್ ಮಾಡಿದ್ದರೂ ಫೋನ್‌ನಲ್ಲಿ ಮಾಹಿತಿ ತಿಳಿಸುವ ಮೂರ್ಖ ಕೆಲಸಕ್ಕೆ ಮುಂದಾಗಬೇಡಿ.
ಎಲ್ಲಕ್ಕಿಂತ ಮುಖ್ಯವಾಗಿ, ಫ್ರೀ ಆಫರ್‌ಗಳಿಗೆ, ಡಿಸ್ಕೌಂಟ್‌ಗಳಿಗೆ ಮರುಳಾಗಬೇಡಿ. ಎಚ್ಚರವಾಗಿರಿ, ಜಾಗೃತಿ ಮೂಡಿಸಿ..
#ಜನಹಿತಕ್ಕಾಗಿ ಜಾರಿ
Discussion about this post