ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಹೊನ್ನಾವರದ ಮಂಜುನಾಥ ನಾಯ್ಕ ಅವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. 10 ಸಾವಿರ ರೂ ಮೌಲ್ಯದ ಮರಳು ಕದ್ದು ಸಾಗಿಸುತ್ತಿದ್ದ ಅವರು ಆ ಮರಳಿನ ಜೊತೆ ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊನ್ನಾವರದ ಎಮ್ಮೆಬೈಲಿನ ಮಂಜುನಾಥ ನಾಯ್ಕ ಅವರು ಅಕ್ರಮವಾಗಿ ಮರಳು ಸಾಗಾಟ ಮಾಡಿ ಜೀವನ ನಡೆಸುತ್ತಿದ್ದರು. ತಮ್ಮ ಟಾಟಾ ಟಿಪ್ಪರ್ ವಾಹನದಲ್ಲಿ ಕದ್ದು ಮುಚ್ಚಿ ಮರಳು ಸಾಗಿಸುವುದರಲ್ಲಿ ಅವರು ಪರಿಣಿತಿಪಡೆದಿದ್ದರು. ಪೊಲೀಸರ ಜೊತೆ ಗಣಿ ಇಲಾಖೆ, ತಹಶೀಲ್ದಾರ್ ಸೇರಿ ವಿವಿಧ ಹಂತದ ಅಧಿಕಾರಿಗಳನ್ನು ಅವರು ಯಾಮಾರಿಸಿ ದಂಧೆ ನಡೆಸುತ್ತಿದ್ದರು.
ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಮರಳು ತೆಗೆಸುತ್ತಿದ್ದ ಮಂಜುನಾಥ ನಾಯ್ಕ ಅವರು ಸರ್ಕಾರಿ ಬೊಕ್ಕಸಕ್ಕೂ ನಷ್ಟ ಮಾಡುತ್ತಿದ್ದರು. ಮರಳು ತೆಗೆಯಲು ಹಾಗೂ ಸಾಗಾಟಕ್ಕೆ ಅವರು ಪರವಾನಿಗೆಪಡೆದಿರಲಿಲ್ಲ. ಜೊತೆಗೆ ರಾಜಧನವನ್ನು ಪಾವತಿ ಮಾಡುತ್ತಿರಲಿಲ್ಲ. ಅದಾಗಿಯೂ, ರಾಜಾರೋಷವಾಗಿ ಅವರು ಹೆದ್ದಾರಿ ಮೂಲಕವೇ ಮರಳು ಸಾಗಾಟ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದರು.
ಸೆಪ್ಟೆಂಬರ್ 9ರಂದು ಅವರ ಆಟ ಎಂದಿನoತೆ ನಡೆಯಲಿಲ್ಲ. ಕಾಸರಕೋಡಿನಿಂದ ಹೊನ್ನಾವರದ ಕಡೆ ಮಂಜುನಾಥ ನಾಯ್ಕ ಅವರು ಮರಳು ತರುತ್ತಿದ್ದಾಗ ಹೊನ್ನಾವರದ ಪ್ರಭೋದಯ ಭವನದ ಬಳಿ ಪಿಐ ಸಿದ್ದರಾಮೇಶ್ವರ ಅವರು ತಡೆದರು. ಆ ಟಿಪ್ಪರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದರು. ಆಗ, ಮಂಜುನಾಥ ನಾಯ್ಕ ಅವರು ಕೊಂಚ ದೂರದಲ್ಲಿ ಟಿಪ್ಪರ್ ನಿಲ್ಲಿಸಿ ಓಡಿ ಪರಾರಿಯಾದರು. 10 ಸಾವಿರ ರೂ ಮೌಲ್ಯದ 3 ಬರಾಸ್ ಮರಳಿನ ಜೊತೆ ಟಿಪ್ಪರನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
Discussion about this post