ಕುಮಟಾದ ಸಾವರ್ ಫರ್ನಾಂಡಿಸ್ ಹಾಗೂ ಸಾಲು ಲೀಮಾ ಅವರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ವಿನ್ನಿ ಮಿರಾಂದಾ ಅವರು ಲಕ್ಷಾಂತರ ರೂ ಹಣಪಡೆದು ಯಾಮಾರಿಸಿದ್ದಾರೆ. ವಿದೇಶಿ ಕೆಲಸದ ಆಸೆಯಲ್ಲಿ ಸಾಲ ಮಾಡಿ ಆಕೆಗೆ ಹಣಕೊಟ್ಟಿದ್ದ ಯುವಕರ ಬದುಕು ಇದೀಗ ಬೀದಿಗೆ ಬಂದಿದೆ.
ಕುಮಟಾದ ಮಿರ್ಜಾನಿನಲ್ಲಿ ಸಾವರ್ ಮಾರ್ಷಲ್ ಫರ್ನಾಂಡಿಸ್ ಅವರು ಪೇಂಟಿoಗ್ ಕೆಲಸ ಮಾಡಿಕೊಂಡು ಆರಾಮಾಗಿದ್ದರು. ಅಲ್ಪ ಆದಾಯವಾದರೂ ಜೀವನಕ್ಕೆ ತೊಂದರೆ ಇರಲಿಲ್ಲ. ಹೀಗಿರುವಾಗ ಸಾವರ್ ಫರ್ನಾಂಡಿಸ್ ಅವರಿಗೆ ಸ್ನೇಹಿತ ಸಾಲು ಲೀಮಾ ಅವರು ವಿದೇಶ ಪ್ರವಾಸದ ಕನಸು ತುಂಬಿದರು. `ವಿದೇಶದಲ್ಲಿ ದುಡಿದು ಬೇಗ ದೊಡ್ಡವರಾಗೋಣ’ ಎಂಬ ಕನಸುಗಳನ್ನು ಬಿತ್ತಿದರು. ಐಷಾರಾಮಿ ಬದುಕು ನೋಡಬೇಕು ಎಂಬ ಆಸೆಯಲ್ಲಿದ್ದ ಸಾವರ್ ಅವರಿಗೆ ಗೆಳೆಯನ ಮಾತು ಹಿತ ಎನಿಸಿತು.
ಸಾವರ್ ಫರ್ನಾಂಡಿಸ್ ಅವರಿಗೆ ಸಾಲು ಲೀಮಾ ಅವರು ಹೊನ್ನಾವರ ರಾಯಲಕೇರಿಯ ವಿನ್ನಿ ಮಿರಾಂದಾ ಅವರನ್ನು ಪರಿಚಯ ಮಾಡಿಸಿದರು. 2024ರ ಅಕ್ಟೊಬರ್ 19ರಂದು ಆ ಮೂವರು ಒಟ್ಟಿಗೆ ಕೆಲಸದ ಬಗ್ಗೆ ಮಾತನಾಡಿದರು. `ವಿದೇಶದಲ್ಲಿ ಒಳ್ಳೆಯ ನೌಕರಿ ಕೊಡಿಸುವುದು ನನ್ನ ಹೊಣೆ’ ಎಂದು ವಿನ್ನಿ ಮಿರಾಂದಾ ನಯವಾಗಿ ಮಾತನಾಡಿದರು. ಆಕೆಯ ಮಾತಿಗೆ ಸಾಲು ಲೀಮಾ ಹಾಗೂ ಸಾವರ್ ಫರ್ನಾಂಡಿಸ್ ಖುಷಿಯಾಗಿ ಉಬ್ಬಿ ಹೋದರು. ವೀಸಾ-ಪಾಸ್‌ಪೋರ್ಟ ಸೇರಿ ಅನೇಕ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡರು.
ಮತ್ತೊಮ್ಮೆ ಸಿಕ್ಕ ವಿನ್ನಿ ಮಿರಾಂದಾ ಅಜರಬೈಜಾನ್ ದೇಶದಲ್ಲಿ ಫುಡ್ ಪ್ಯಾಕಿಂಗ್ ಉದ್ಯೋಗ ಖಾಲಿಯಿರುವ ಬಗ್ಗೆ ಹೇಳಿದರು. `ಕಾಗದಪತ್ರಗಳ ವಿಷಯಕ್ಕೆ ಕೊಂಚ ಹಣ ಖರ್ಚಾಗುತ್ತದೆ’ ಎಂದೂ ನಂಬಿಸಿದರು. ಆ ಮಾತು ನಂಬಿದ ಸಾವರ್ ಫರ್ನಾಂಡಿಸ್ 4 ಲಕ್ಷ ರೂ ತಂದು ವಿನ್ನಿ ಮಿರಾಂದಾ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದರು.. ಸಾಲು ಲೀಮಾ ಸಹ ಮತ್ತೆ 4 ಲಕ್ಷ ರೂಪಾಯಿಗಳನ್ನು ಹೊನ್ನಾವರ ಹುಡುಗಿಯ ಕೈಗೆ ಕೊಟ್ಟರು.
ಆ ಇಬ್ಬರು ಯುವಕರು ತಮ್ಮ ವಿದೇಶಿ ನೌಕರಿ ಬಗ್ಗೆ ಊರಿನಲ್ಲಿ ಎಲ್ಲಾ ಕಡೆ ಹೇಳಿದ್ದರು. ಹೀಗಾಗಿ ಆ ಊರಿಗೆ ಅವರು ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಅದೇ ಖುಷಿಯಲ್ಲಿ ದಿನ ಕಳೆಯುತ್ತಿದ್ದರು. ಆದರೆ, ಆರು ತಿಂಗಳಾದರೂ ಅವರಿಗೆ ವಿದೇಶಿ ಉದ್ಯೋಗದ ಕರೆಯೋಲೆ ಬರಲಿಲ್ಲ. ಈ ಬಗ್ಗೆ ವಿಚಾರಿಸೋಣ ಎಂದು ಕಾಸುಪಡೆದ ವಿನ್ನಿ ಮಿರಾಂದಾ ಹುಡುಕಾಟ ನಡೆಸಿದರೂ ಆಕೆಯ ಸುಳಿವು ಸಿಗಲಿಲ್ಲ.
2025ರ ಜೂನ್ 30ರವರೆಗೆ ಸಾಲು ಲೀಮಾ ಹಾಗೂ ಸಾವರ್ ಫರ್ನಾಂಡಿಸ್ ಸೇರಿ ವಿನ್ನಿ ಮಿರಾಂದಾ ಅವರಿಗಾಗಿ ಎಲ್ಲಾ ಕಡೆ ಹುಡುಕಿದರು. 8 ಲಕ್ಷ ರೂ ಹಣಪಡೆದಿದ್ದ ವಂಚಕಿ ವಿನ್ನಿ ಮಿರಾಂದಾ ಅವರಿಬ್ಬರನ್ನು ಯಾಮಾರಿಸಿ ಪರಾರಿಯಾಗಿದ್ದರು. ಮೋಸ ಹೋಗಿದನ್ನು ಅರಿತ ಅವರಿಬ್ಬರು ಪೊಲೀಸರ ಮೊರೆ ಹೋದರು. ತಮಗಾದ ಮೋಸದ ಬಗ್ಗೆ ಸಾವರ್ ಫರ್ನಾಂಡಿಸ್ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ದುಡ್ಡು ಕಳೆದುಕೊಂಡವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.



Discussion about this post