ಹೊನ್ನಾವರದ ಹೇರಂಗಡಿ ಗ್ರಾಮ ಪಂಚಾಯತದ ಗ್ರಾಮಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ಮಾಹಿತಿ ನೀಡಲು ಆಗಮಿಸಿದ ಕೆಪಿಸಿಯ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಜನ ಅವರನ್ನು ತರಾಠೆಗೆ ತೆಗೆದುಕೊಂಡರು. ಯೋಜನೆಗೂ ಜನ ವಿರೋಧವ್ಯಕ್ತಪಡಿಸಿದರು.
`ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಭೂಮಿಯ ಅಗೆತ, ಸ್ಫೋಟಕಗಳ ಬಳಕೆ, ಅನಗತ್ಯ ಹಾಗೂ ಅವೈಜ್ಞಾನಿಕ ಕಾಮಗಾರಿ ಬೇಡ’ ಎಂದು ಜನ ಹೇಳಿದರು. `ಅರಣ್ಯ ನಾಶವು, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಗುಡ್ಡದ ಅಂಚಿನಲ್ಲಿರುವ ಜಲಾಶಯದ ಕೆಳಗೆ 7 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸುವುದು ಅಪಾಯ’ ಎಂದು ಎಚ್ಚರಿಸಿದರು. `ಕೆಪಿಸಿಯ ಈ ಹಿಂದಿನ ವಿವಿಧ ಯೋಜನೆಯಿಂದ ನಿರಾಶ್ರಿತರಾದವರ ಕುರಿತು ಮತ್ತು ನೆರೆ ಸಂತ್ರಸ್ತರು ಪಡುತ್ತಿರುವ ಬವಣೆಯ ಕುರಿತು ನೀವು ಎಂದಾದರೂ ಚಿಂತಿಸಿದ್ದೀರಾ?’ ಎಂದು ಅಲ್ಲಿದ್ದವರು ಪ್ರಶ್ನಿಸಿದರು.
`ನಮ್ಮ ಪಂಚಾಯತದ ಹೆಚ್ಚಿನ ಪ್ರದೇಶವು ಪಶ್ಚಿಮ ಘಟ್ಟದ ಅಂಚಿನ ತಗ್ಗು ಪ್ರದೇಶದಲ್ಲಿದೆ. ಬಹುಪಾಲು ಅರಣ್ಯವಿರುವ, ಜೀವನೋಪಾಯಕ್ಕೆ ಇಲ್ಲಿನ ಜನರು ಕೃಷಿ, ತೋಟಗಾರಿಕೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಹರಿಯುವ ಶರಾವತಿ ನದಿಯಿಂದ ಏತ ನೀರಾವರಿಯ ಮೂಲಕ ರೈತರ ಜಮೀನಿಗೆ ನೀರುಣಿಸಲಾಗುತ್ತಿದೆ. ಕುಡಿಯುವ ನೀರಿಗೂ ಜನರು ಶರಾವತಿಯನ್ನೇ ಅವಲಂಬಿಸಿದ್ದು ಈ ನಡುವೆ ಶರಾವತಿ ನದಿ ನೀರಿಗೆ ಬೇಸಿಗೆಯಲ್ಲಿ ಅಳ್ಳಂಕಿಯವರೆಗೆ ಸಮುದ್ರದ ಉಪ್ಪುನೀರು ಸೇರುತ್ತಿದೆ’ ಎಂದು ವಿವರಿಸಿದರು.
`ಅಮೂಲ್ಯವಾದ ಮಳೆಕಾಡು, ಜೀವ ವೈವಿಧ್ಯಗಳ ಸುರಕ್ಷತೆಯ ಹಿತದೃಷ್ಟಿಯಿಂದ ಯೋಜನೆ ವಿರೋಧಿಸಬೇಕು. ಭೂಕುಸಿತ, ಗುಡ್ಡ ಕುಸಿತದ ಅಪಾಯದಿಂದ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳುವ ಹಿತದೃಷ್ಟಿಯಿಂದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ ವಿದ್ಯುತ್ ಯೋಜನೆಯ ಅನುಷ್ಠಾನವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು. ಉತ್ತರಿಸಲು ತಡವರಿಸಿದ ಅಧಿಕಾರಿಗಳನ್ನು ಜನ ತರಾಠೆಗೆ ತೆಗೆದುಕೊಂಡರು.
