ಸಿದ್ದಾಪುರದ ಸುರೇಶ ಹೆಗಡೆ ಅವರ ಮನೆಯಲ್ಲಿದ್ದ ಅಡಿಕೆ ಕಳ್ಳತನವಾಗಿದೆ. ವಾರಗಳ ಕಾಲ ಸ್ವತಃ ಕಳ್ಳರ ಹುಡುಕಾಟ ನಡೆಸಿದ ಹೆಗಡೆಯವರು ಕೊನೆಗೂ ಕಳ್ಳರು ಪತ್ತೆಯಾಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.
ಸಿದ್ದಾಪುರದ ಸರಕುಳಿಯ ಮೇಲಗಿರಿಮನೆ ಬಳಿಯ ಸುರೇಶ ಹೆಗಡೆ ಅವರು ಕೃಷಿ ಕಾಯಕ ಮಾಡಿಕೊಂಡಿದ್ದರು. ತಮ್ಮ ಮನೆ ಹಿಂದೆ ಅವರು ಅಡಿಕೆ ಮೂಟೆಗಳನ್ನು ರಾಶಿ ಹೊಡೆದಿದ್ದರು. ಅಗಸ್ಟ 28ರಂದು ಎಲ್ಲಾ ಅಡಿಕೆ ಮೂಟೆಗಳನ್ನು ನೋಡಿ ಸರಿಯಾಗಿ ಲೆಕ್ಕ ಮಾಡಿಟ್ಟಿದ್ದರು. ಅಗಸ್ಟ 30ರಂದು ಹೋಗಿ ನೋಡಿದಾಗ ಒಂದು ಅಡಿಕೆ ಮೂಟೆ ಕಡಿಮೆ ಕಾಣಿಸಿತು.
ತೂಕ ಗಮನಿಸಿದಾಗ 70 ಕೆಜಿಯ ಒಂದು ಅಡಿಕೆ ಮೂಟೆ ಕಣ್ಮರೆಯಾಗಿತ್ತು. `30 ಸಾವಿರ ರೂಪಾಯಿ ಮೌಲ್ಯದ ಚಾಲಿ ಅಡಿಕೆಯನ್ನು ಯಾರೋ ಕದ್ದಿದ್ದಾರೆ’ ಎಂದು ಅವರು ಊರಿನಲ್ಲಿ ಸುದ್ದಿ ಬಿಟ್ಟಿದ್ದರು. ಕಳ್ಳರ ಹುಡುಕಾಟಕ್ಕೆ ನಾನಾ ಬಗೆಯ ಪ್ರಯತ್ನ ಮಾಡಿದ್ದರು. ಊರಿನವರ ಸಹಕಾರದಲ್ಲಿಯೂ ಕಳ್ಳರ ಕುರುಹು ಹುಡುಕಿದ್ದರು. ಆದರೆ, ನಿಜವಾದ ಕಳ್ಳ ಯಾರು? ಎಂದು ಮಾತ್ರ ಗೊತ್ತಾಗಲಿಲ್ಲ.
ಅದಾಗಿಯೂ ಸೆಪ್ಟೆಂಬರ್ 8ರವರೆಗೆ ಕಾದ ಅವರು ಕುಟುಂಬದವರ ಜೊತೆ ಚರ್ಚಿಸಿ ಪೊಲೀಸ್ ಠಾಣೆಗೆ ಬಂದರು. ಅಡಿಕೆ ಕಳ್ಳತನದ ವಿಷಯ ವಿವರಿಸಿ ಕಳ್ಳನ ಪತ್ತೆಗಾಗಿ ಮನವಿ ಮಾಡಿದರು. `ತಮ್ಮ ಅಡಿಕೆ ಮೂಟೆಯನ್ನು ಹುಡುಕಿಕೊಡಿ’ ಎಂದು ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.
ಕಿರಾಣಿ ವ್ಯಾಪಾರಿಗೆ ನಷ್ಟ!
ದಾಂಡೇಲಿಯ ಕಿರಾಣಿ ವ್ಯಾಪಾರಿ ಇರ್ಪಾನ್ ಶೇಖ್ ಅವರ ಅಂಗಡಿಯಲ್ಲಿ ಕಳ್ಳತನವಾಗಿದೆ. ಹಣ, ಮೊಬೈಲನ್ನು ಕಳ್ಳರು ದೋಚಿದ್ದು, ಇರ್ಪಾನ್ ಶೇಖ್ ಅವರು 35 ಸಾವಿರ ರೂ ನಷ್ಟ ಅನುಭವಿಸಿದ್ದಾರೆ.
ದಾಂಡೇಲಿಯ ಬೊಮ್ಮನಹಳ್ಳಿಯ ಇರ್ಪಾನ್ ಶೇಖ್ ಅವರು ಅಂಬಿಕಾನಗರದ ಬಳಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಇದರ ಜೊತೆ ಅವರು ಬ್ಯಾಂಕ್ ಪ್ರತಿನಿಧಿಯಾಗಿಯೂ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 8ರ ರಾತ್ರಿ ಅವರ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ, ಮೊಬೈಲ್ ದೋಚಿದ್ದಾರೆ. ಕಿರಾಣಿ ಅಂಗಡಿ ಹಿಂದಿನ ಬಾಗಿಲ ಕೀಲಿ ಒಡೆದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 1450ರೂ ಹಾಗೂ ಬ್ಯಾಗಿನಲ್ಲಿದ್ದ 13 ಸಾವಿರ ರೂ ಎಗರಿಸಿದ್ದಾರೆ. ಇದರೊಂದಿಗೆ 8 ಸಾವಿರ ರೂ ಮೌಲ್ಯದ ಮೊಬೈಲನ್ನು ಅಪಹರಿಸಿದ್ದಾರೆ. ಈ ಬಗ್ಗೆ ಇರ್ಪಾನ್ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ನಿಮ್ಮ ಆಸ್ತಿ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಸಿ’



Discussion about this post