ಯಲ್ಲಾಪುರದಲ್ಲಿ ಜೀರ್ಣಾವ್ಯವಸ್ಥೆಯಲ್ಲಿದ್ದ ಸವಣಗೇರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರನ್ನು ಅಲ್ಲಿಂದ ವರ್ಗಾಯಿಸಲಾಗಿದೆ. ಇದೇ ತಾಲೂಕಿನ ಕಾಳಮ್ಮನಗರ ಶಾಲೆಗೆ ಅವರನ್ನು ಮುಖ್ಯಾಧ್ಯಾಪಕರನ್ನಾಗಿ ನೇಮಿಸಲಾಗಿದೆ.
ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಸಂಜೀವ ಹೊಸ್ಕೇರಿ ಅವರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದರು. ತಮಗಿರುವ ಸಂಪರ್ಕ ಹಾಗೂ ಪ್ರಭಾವ ಬಳಸಿ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿದ್ದರು. ಸವಣಗೇರಿ ಶಾಲೆಯ ಮಕ್ಕಳಿಗೆ ಅನುಕೂಲಕ್ಕಾಗಿ ನೂತನ ಕೊಠಡಿ, ಶೌಚಾಲಯ, ಆಟದ ಮೈದಾನ ಸೇರಿ ಬಗೆ ಬಗೆಯ ಸೌಕರ್ಯ ಕಲ್ಪಿಸಿದ್ದರು. ತಾಲೂಕಿನಲ್ಲಿಯೇ ಪ್ರಪ್ರಥಮ ಬಾರಿಗೆ ಕನ್ನಡ ಶಾಲೆಗೆ ಇಂಟರ್‌ನೆಟ್ ಸಂಪರ್ಕ ಕೊಡಿಸಿ ಡಿಜಿಟಲ್ ಮಾಧ್ಯಮಗಳ ಮೂಲಕ ಕಲಿಕೆ ಶುರು ಮಾಡಿದ್ದರು. ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರು ಮುಖ್ಯವಾಹಿನಿಗೆ ಬರುವಂತೆ ಶ್ರಮಿಸಿದ್ದರು.
1998ರ ಅವಧಿಯಲ್ಲಿ ಸಂಜೀವ ಹೊಸ್ಕೇರಿ ಅವರು ಕಾಳಮ್ಮ ನಗರ ಶಾಲೆಯಲ್ಲಿ ಪಾಠ ಮಾಡಿದ್ದರು. ಇದೀಗ ಅದೇ ಶಾಲೆಗೆ ಮುಖ್ಯಾಧ್ಯಾಪಕರಾಗಿ ಸಂಜೀವ ಹೊಸ್ಕೇರಿ ಅವರ ವರ್ಗಾವಣೆ ನಡೆದಿದೆ. ತಮ್ಮೂರಿನ ಶಾಲೆಗೆ ಉತ್ತಮ ಶಿಕ್ಷಕರನ್ನು ನೀಡಿದಕ್ಕಾಗಿ ಕಾಳಮ್ಮನಗರ ಭಾಗದವರು ಸ್ವಾಗತಿಸಿದ್ದಾರೆ. ದಿಢೀರ್ ಆಗಿ ಸಂಜೀವ ಹೊಸ್ಕೇರಿ ಅವರ ವರ್ಗಾವಣೆ ನಡೆದಿರುವುದರಿಂದ ಸವಣಗೇರಿ ಭಾಗದ ಜನ ಬೇಸರದಲ್ಲಿದ್ದಾರೆ. ಅದರಲ್ಲಿಯೂ ಶೈಕ್ಷಣಿಕ ವರ್ಷದ ಅರ್ದ ಅವಧಿಯಲ್ಲಿ ವರ್ಗಾವಣೆ ನಡೆದಿರುವುದಕ್ಕೆ ಆಕ್ಷೇಪಿಸಿದ್ದಾರೆ. `ಶೈಕ್ಷಣಿಕ ವರ್ಷದ ಮುಕ್ತಾಯದವರೆಗಾದರೂ ಸಂಜೀವ ಹೊಸ್ಕೇರಿ ಅವರನ್ನು ಸವಣಗೇರಿ ಶಾಲೆಗೆ ಹೆಚ್ಚುವರಿ ಹೊಣೆವಹಿಸಿ ಕಳುಹಿಸಬೇಕು’ ಎಂದು ಸವಣಗೇರಿ ಭಾಗದವರು ಒತ್ತಾಯಿಸಿದ್ದಾರೆ.
`ಸರ್ಕಾರಿ ನೌಕರರಿಗೆ ವರ್ಗಾವಣೆ ಸಹಜ. ಜನಪ್ರತಿನಿಧಿಗಳು ಹಾಗೂ ಊರಿನವರ ಸಹಕಾರದಿಂದ ಶಾಲೆಯ ಅಭಿವೃದ್ಧಿ ಸಾಧ್ಯವಾಗಿದ್ದು, ಅವರೆಲ್ಲರೂ ಪ್ರೀತಿಯನ್ನು ಸದಾ ನೆನೆಯುವೆ’ ಎಂದು ಸಂಜೀವಕುಮಾರ ಹೊಸ್ಕೇರಿ ಅವರು ಪ್ರತಿಕ್ರಿಯಿಸಿದ್ದಾರೆ.
Discussion about this post