ಯಲ್ಲಾಪುರ-ಅಂಕೋಲಾ ಗಡಿಭಾಗವಾದ ಗುಳ್ಳಾಪುರ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮನಸ್ಸು ಮಾಡಿದೆ. ಗುಳ್ಳಾಪುರ-ಹೆಗ್ಗಾರ್ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ ಅನುದಾನ ಮಂಜೂರಿಯಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿಯೂ ಇದಕ್ಕೆ ಅನುಮೋದನೆ ಸಿಕ್ಕಿದೆ.
ನಿರೀಕ್ಷೆಯಂತೆ ಈ ಸೇತುವೆ ನಿರ್ಮಾಣ ಕಾರ್ಯ ಬಹುಬೇಗ ಮುಗಿದರೆ ಎರಡೂ ತಾಲೂಕಿನ ಜನರಿಗೆ ಅನುಕೂಲವಾಗಲಿದೆ. ನಾಲ್ಕು ವರ್ಷಗಳ ಹಿಂದಿನ ನೆರೆ ಪ್ರವಾಹದಲ್ಲಿ ಈ ಸೇತುವೆ ಕುಸಿದು ಬಿದ್ದಿದ್ದು, ಜನ ಸಮಸ್ಯೆಗೆ ಸಿಲುಕಿದ್ದರು. ನೂತನ ಸೇತುವೆ ನಿರ್ಮಾಣಕ್ಕಾಗಿ ಆ ಭಾಗದ ಜನ ಅನೇಕ ಕಡೆ ಅರ್ಜಿ ಸಲ್ಲಿಸಿದ್ದರು. ಪ್ರತಿ ವರ್ಷ ತಾತ್ಕಾಲಿಕ ಸೇತುವೆ ನಿರ್ಮಿಸಿ ಬೇಸಿಗೆ ಅವಧಿಯಲ್ಲಿ ಜನ ಓಡಾಟ ನಡೆಸುತ್ತಿದ್ದು, ಮಳೆ ಬಂದಾಗ ಆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವುದು ಸಾಮಾನ್ಯವಾಗಿತ್ತು.
ಈ ಸೇತುವೆ ನಿರ್ಮಾಣಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪ್ರಯತ್ನಿಸಿದ್ದರು. ಅದರ ಪರಿಣಾಮವಾಗಿ ಇದೀಗ ಅನುದಾನ ಮಂಜೂರಿಯಾಗಿದ್ದು, ತಮ್ಮ ಪ್ರಯತ್ನ ಯಶಸ್ವಿಯಾದ ಬಗ್ಗೆ ಅವರು ಮಾಧ್ಯಮದೊಂದಿಗೆ ಸಂತಸ ಹಂಚಿಕೊAಡಿದ್ದಾರೆ. `ಸೇತುವೆ ನಿರ್ಮಾಣದಿಂದ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ಚುರುಕಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರವೇಶ ಸುಲಭವಾಗಲಿದೆ. ಆರೋಗ್ಯ ಮತ್ತು ತುರ್ತು ಸೇವೆಗಳು ತ್ವರಿತವಾಗಿ ಸಿಗಲಿದೆ’ ಎಂದವರು ಹೇಳಿದ್ದಾರೆ.
`ಈ ಸೇತುವೆ ರೈತರಿಗೆ ತಮ್ಮ ಉತ್ಪನ್ನ ಸಾಗಾಟಕ್ಕೂ ಸಹಕಾರಿ ಆಗಲಿದೆ. ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ಅಭಿವೃದ್ಧಿಗೆ ಈ ಯೋಜನೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ’ ಎಂದು ಅವರು ವಿವರಿಸಿದ್ದಾರೆ.
Discussion about this post