ಭಟ್ಕಳದ ಕಾಡಿನೊಳಗೆ ರಾಶಿ ರಾಶಿ ಮೂಳೆ ಸಿಕ್ಕಿದ್ದು, ಭಾರೀ ಪ್ರಮಾಣದಲ್ಲಿ ಜಾನುವಾರುಗಳ ಹತ್ಯೆ ನಡೆದಿರುವ ಅನುಮಾನ ಕಾಡುತ್ತಿದೆ. ಒಂದೇ ಕಡೆ ನೂರಾರು ದನಗಳ ಮೂಳೆ ಬಿದ್ದಿರುವುದನ್ನು ನೋಡಿ ಸ್ಥಳೀಯರು ಕಂಗಾಲಾಗಿದ್ದಾರೆ.
ಮೂರು ದಿನಗಳ ಹಿಂದೆ ಭಟ್ಕಳದಲ್ಲಿ ನೂರಾರು ದನಗಳ ಹತ್ಯೆ ನಡೆದಿದೆ ಎಂದು ಅನೇಕರು ದೂರಿದ್ದಾರೆ. ದನಗಳ ಹತ್ಯೆ ನಂತರ ಮುಗ್ದಂ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಮೂಳೆಗಳನ್ನು ಎಸೆದ ಬಗ್ಗೆ ಅಂದಾಜಿಸಿದ್ದಾರೆ. ಮೂಳೆ ಬಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.
ಗುಡ್ಡದ ಮೇಲೆ ಹುಡುಕಾಟ ನಡೆಸಿದವರಿಗೆ ಬೇರೆ ಭಾಗದಿಂದ ಚೀಲಗಳಲ್ಲಿ ಮೂಳೆ ಕಟ್ಟಿಕೊಂಡು ಬಂದು ಇಲ್ಲಿ ಎಸೆದಿರುವ ಕುರುಹು ಸಿಕ್ಕಿದೆ. ಹಿಂದೂ ಸಂಘಟನೆ ಪ್ರಮುಖರು ಮೂಳೆಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ಸ್ಥಳೀಯರು ಸಹ ಆ ಪ್ರಮಾಣದಲ್ಲಿ ಮೂಳೆ ಬಿದ್ದಿರುವುದನ್ನು ನೋಡಿ ಅಚ್ಚರಿವ್ಯಕ್ತಪಡಿಸಿದ್ದಾರೆ.
ಭಟ್ಕಳದಲ್ಲಿ ಮೊದಲಿನಿಂದಲೂ ಗೋಹತ್ಯೆ ಜೋರಾಗಿದೆ. ಅಕ್ರಮ ಜಾನುವಾರು ಸಾಗಾಟ ತಡೆಗೆ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲಾ ಕಡೆ ನಾಕಾಬಂಧಿ ಹಾಕಿ ಅಕ್ರಮಗಳನ್ನು ತಡೆಯುವ ಕೆಲಸ ನಡೆಯುತ್ತಿದೆ. ಅದಾಗಿಯೂ ಈ ಪ್ರಮಾಣದಲ್ಲಿ ಮೂಳೆಗಳು ಬಿದ್ದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
Discussion about this post