ವಿಪರೀತ ಶೀತ-ಜ್ವರದ ಪರಿಣಾಮ ಅಂಕೋಲಾದ ಎರಡುವರೆ ತಿಂಗಳ ಮಗು ಸಾವನಪ್ಪಿದೆ. ಮಗುವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನ ಆಗಲಿಲ್ಲ.
ಅಂಕೋಲಾದ ಹುಲಿದೇವರವಾಡದ ಜ್ಯೋತಿ ನಾಯ್ಕ ಹಾಗೂ ಸತೀಶ ನಾಯ್ಕ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಎರಡು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಆ ಮಗುವಿಗೆ ಇಶಿಕಾ ಎಂದು ಹೆಸರಿಟ್ಟಿದ್ದರು. ಮುದ್ದು ಮುದ್ದಾಗಿದ್ದ ಮಗುವಿಗೆ ವಾರದ ಹಿಂದೆ ನೆಗಡಿಯಾಗಿತ್ತು. ಕೊನೆಗೆ ಜ್ವರದಿಂದ ಮಗು ಬಳಲುತ್ತಿತ್ತು.
ಜ್ಯೋತಿ ನಾಯ್ಕ ಅವರು ಮಗುವನ್ನು ಆಸ್ಪತ್ರೆಗೆ ತೋರಿಸಿದ್ದರು. ವೈದ್ಯರು ನೀಡಿದ ಔಷಧವನ್ನು ಸಹ ಸರಿಯಾಗಿ ಕೊಡುತ್ತಿದ್ದರು. ಆದರೆ, ಆ ಮಗು ತಾಯಿಯ ಹಾಲು ಕುಡಿಯುವುದನ್ನೇ ನಿಲ್ಲಿಸಿತು. ಅನಾರೋಗ್ಯ ವ್ಯಾಪಕ ಪ್ರಮಾಣದಲ್ಲಿ ಮಗುವನ್ನು ಕಾಡಿತು. ಹೀಗಾಗಿ ಸತೀಶ ನಾಯ್ಕ ದಂಪತಿ ಮಗುವನ್ನು ವಿವಿಧ ಆಸ್ಪತ್ರೆಗೆ ಕರೆದೊಯ್ದರು. ಸಾಕಷ್ಟು ಪ್ರಯತ್ನ ನಡೆಸಿ ಮಗುವನ್ನು ಕಾಪಾಡುವ ಪ್ರಯತ್ನ ಮಾಡಿದರು.
ಆದರೆ, ಶುಕ್ರವಾರ ನಸುಕಿನ 5 ಗಂಟೆಗೆ ಆ ಮಗು ಉಸಿರಾಟ ನಿಲ್ಲಿಸಿತು. ವಿವಿಧ ವೈದ್ಯರು ಪ್ರಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಮಗುವಿನ ಶವದ ಮುಂದೆ ಕುಟುಂಬದವರ ಆಕಂದ್ರನ ಕೇಳಿಸಿದ್ದು, ನೆರೆಹೊರೆಯವರ ಬಳಿಯೂ ಆ ಸನ್ನಿವೇಶ ನೋಡಲು ಸಾಧ್ಯವಾಗಲಿಲ್ಲ. ಮಗು ಸಾವನಪ್ಪಿದ ನೋವನ್ನು ಜ್ಯೋತಿ ನಾಯ್ಕ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರ ಬಳಿ ತೋಡಿಕೊಂಡಿದ್ದು, ಪೊಲೀಸರು ಅವರನ್ನು ಸಮಾಧಾನ ಮಾಡಿದರು. ನಂತರ ಪ್ರಕರಣ ದಾಖಲಿಸಿದರು.
Discussion about this post