`ದೇವರ ತೆಂಗಿನಕಾಯಿ ಮನೆಯಲ್ಲಿದ್ದರೆ ಮಗನ ಅನಾರೋಗ್ಯ ದೂರವಾಗುತ್ತದೆ’ ಎಂದು ಭಾವಿಸಿದ ಜೊಯಿಡಾದ ದೊಂಡು ವರಕ ಅವರು ಆ ತೆಂಗಿನಕಾಯಿಪಡೆಯುವುದಕ್ಕಾಗಿ ತಮ್ಮನ ಪತ್ನಿಯನ್ನು ಕೊಂದಿದ್ದಾರೆ. ದೊಂಡು ವರಕ ಅವರು ಗುದ್ದಲಿಯಿಂದ ಹೊಡೆದ ರಭಸಕ್ಕೆ ಭಾಗ್ಯಶ್ರೀ ವರಕ ಸಾವನಪ್ಪಿದ್ದಾರೆ.
ಜೊಯಿಡಾದ ಆಮಶೇಷ-ಕೊಲೆಮಾಳ ಗ್ರಾಮದಲ್ಲಿ ಮೂಡನಂಬಿಕೆಯ ಪರಿಣಾಮ ಕೊಲೆ ನಡೆದಿದೆ. ದೊಂಡು ವರಕ ಅವರ ಮಗನಿಗೆ ಅನಾರೋಗ್ಯ ಕಾಡುತ್ತಿತ್ತು. ದೇವರ ತೆಂಗಿನಕಾಯಿ ಯಾರ ಮನೆಯಲ್ಲಿ ಇದ್ದವರಿಗೆ ಒಳ್ಳೆಯದಾಗುತ್ತದೆ ಎಂದು ಅವರು ನಂಬಿದ್ದರು. ಆ ತೆಂಗಿನಕಾಯಿ ಅವರ ತಮ್ಮ ಸೋನು ವರಕ್ ಅವರ ಮನೆಯಲ್ಲಿರುವುದೇ ಮಗನ ಅನಾರೋಗ್ಯಕ್ಕೆ ಕಾರಣ ಎಂದು ದೊಂಡು ವರಕ ಭಾವಿಸಿದ್ದರು.
ಆ ತೆಂಗಿನಕಾಯಿ ತಮಗೆ ಕೊಡುವಂತೆ ದೊಂಡು ವರಕ ದುಂಬಾಲು ಬಿದ್ದಿದ್ದರು. ಆದರೆ, ತಮ್ಮ ಅದನ್ನು ಕೊಟ್ಟಿರಲಿಲ್ಲ. ಇದೇ ವಿಷಯವಾಗಿ ಆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಗುರುವಾರ ಸೋನು ವರಕ್ ಅವರು ಮನೆಯಲ್ಲಿರಲಿಲ್ಲ. ಆ ವೇಳೆ ದೊಂಡು ವರಕ್ ಗಲಾಟೆ ಶುರು ಮಾಡಿದ್ದು, ತೆಂಗಿನಕಾಯಿ ಕೊಡದ ಕಾರಣ ಸೋನು ವರಕ್ ಅವರ ಪತ್ನಿ ಭಾಗ್ಯಶ್ರೀ ವರಕ ಅವರಿಗೆ ಗುದ್ದಲಿಯಿಂದ ಹೊಡೆದರು.
ಪರಿಣಾಮ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯ ಹುಡುಕಾಟ ನಡೆಸಿದ್ದಾರೆ.
