ಶಿರಸಿಯ ಅಯ್ಯಪ್ಪ ನಗರದಲ್ಲಿ ಸ್ಥಾಪಿಸಲಾದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಲಾಗಿದೆ. ನಿಷೇಧದ ನಡುವೆಯೂ ಡಿಜೆ ಸದ್ದು ಮಾಡಿದ ಕಾರಣ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ ಅಯ್ಯಪ್ಪ ನಗರದ ಜನ ಮೊದಲಿನಿಂದಲೂ ಶ್ರದ್ಧಾ-ಭಕ್ತಿಯಿಂದ ಗಣಪತಿ ಕೂರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಶಿರಸಿಕಾ ಮಹಾರಾಜ ಗಜಾನನ ಉತ್ಸವ ಸಮಿತಿಯವರು ಗಣೇಶನನ್ನು ಕೂರಿಸುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇಷ್ಟು ದಿನಗಳ ಕಾಲ ಶ್ರದ್ಧಾ-ಭಕ್ತಿಯಿಂದ ಗಣಪನ ಆರಾಧನೆ ನಡೆಸಿದ ಸಮೀತಿಯವರು ಕೊನೆ ದಿನ ನಿಷೇಧಿತ ಡಿಜೆ ಬಳಕೆ ಮಾಡಿದರು. ಸೆಪ್ಟೆಂಬರ್ 10ರಂದು ಅದ್ಧೂರಿ ಪೂಜೆ ನಂತರ ನಡೆದ ಗಣಪತಿ ವಿಸರ್ಜನೆ ಅವಧಿಯಲ್ಲಿ ಡಿಜೆ ಬಳಸಿದನ್ನು ಪೊಲೀಸರು ಸಹಿಸಲಿಲ್ಲ.
ಶಿರಸಿ ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕುರಿ ಅವರು ಗಣೇಶ ವಿಸರ್ಜನೆಯ ಅವಧಿಯಲ್ಲಿ ಭದ್ರತೆಗಾಗಿ ಅಯ್ಯಪ್ಪ ನಗರಕ್ಕೆ ಹೋಗಿದ್ದರು. ಆ ವೇಳೆ ಅಲ್ಲಿ ಡಿಜೆ ಬಳಸಲಾಗಿದ್ದು ಅದಕ್ಕೆ ಅನುಮತಿ ಇಲ್ಲದ ಬಗ್ಗೆ ಸಮಿತಿಯವರಿಗೆ ರತ್ನಾ ಕುರಿ ಅವರು ಮನವರಿಕೆ ಮಾಡಿದರು. ಅದಾದ ನಂತರ ಡಿಜೆ ತಂದಿದ್ದ ಧಾರವಾಡದ ನಿಖಿಲ್ ನಾಯ್ಕರ್ ಅವರಿಗೂ ಡಿಜೆ ಬಳಸದಂತೆ ಸೂಚಿಸಿದರು. ಆದರೆ, ಅರ‍್ಯಾರು ಪೊಲೀಸರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಸಂಜೆ ಗಣೇಶ ವಿಸರ್ಜನೆ ವೇಳೆ ದೊಡ್ಡದಾಗಿ ಡಿಜೆ ಬಳಸಲಾಯಿತು. ಸಂಚಾರಕ್ಕೆ ಅಡ್ಡಿ ಆಗುವ ರೀತಿಯಲ್ಲಿ ಡಿಜೆ ಹೊಂದಿದ್ದ ಟಾಕ್ಟರ್ ಸಂಚರಿಸಿತು. ಡಿಜೆ ಬಳಸಿದ ವಾಹನಕ್ಕೆ ನೋಂದಣಿ ಸಂಖ್ಯೆ ಸಹ ಇರಲಿಲ್ಲ. ಪೊಲೀಸರ ಸೂಚನೆಯನ್ನು ಸಹ ಅಲ್ಲಿನವರು ಪಾಲಿಸಲಿಲ್ಲ. ಪ್ರಶ್ನಿಸಿದರೂ ಸೂಕ್ತ ಉತ್ತರ ಕೊಡಲಿಲ್ಲ. ಈ ಎಲ್ಲಾ ಹಿನ್ನಲೆ ಪಿಎಸ್‌ಐ ರತ್ನಾ ಕುರಿ ಅವರು ಡಿಜೆ ಬಳಸಿದ ಬಗ್ಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
Discussion about this post