`ಎಲ್ಲಾ ದಾಖಲೆಗಳು ಸರಿಯಿದ್ದರೂ ತಮಗೆ ವೃದ್ದಾಪ್ಯ ವೇತನ ಮಾತ್ರ ಸಿಗುತ್ತಿಲ್ಲ’ ಎಂದು ಕುಮಟಾದ ಆಸಿಯಾಬಿ ಶೇಖ್ ದೂರಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕುಮಟಾ ತಾಲೂಕಿನ ಹಳೆ ಮೀನು ಮಾರುಕಟ್ಟೆ ಬಳಿ ಆಸಿಯಾಬಿ ಶೇಖ ಅವರು ವಾಸವಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿದೆ. ಇಂದಿರಾಗಾoಧಿ ವೃದ್ದಾಪ್ಯ ವೇತನದ ಸಲುವಾಗಿ ಆದಾಯ ಪ್ರಮಾಣ ಪತ್ರ ಕೋರಿ ಎರಡು ಬಾರಿ ಅರ್ಜಿ ಸಲ್ಲಿಸಿದರೂ ಅದು ಸಿಕ್ಕಿಲ್ಲ. ಹೀಗಾಗಿ ಅವರು ಉಸ್ತುವಾರಿ ಸಚಿವರ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.
`ಎರಡು ಬಾರಿ ತಮ್ಮ ಆದಾಯ ಪ್ರಮಾಣ ಪತ್ರದ ಅರ್ಜಿ ರದ್ದಾಗಿದೆ. ಒಮ್ಮೆ ಅಗತ್ಯ ದಾಖಲೆ ಒದಗಿಸಿಲ್ಲ ಎಂದು ರದ್ದು ಮಾಡಲಾಗಿದೆ. ಇನ್ನೊಮ್ಮೆ ನಾನು ಹೊಲನಗದ್ದ ನಿವಾಸಿ ಎಂದು ತಪ್ಪು ಮಾಹಿತಿ ನೀಡಿ ಅರ್ಜಿ ರದ್ದು ಮಾಡಲಾಗಿದೆ’ ಎಂದವರು ದೂರಿದ್ದಾರೆ. `ನನ್ನ ಆಧಾರ್ ಕಾರ್ಡಿನಲ್ಲಿ ಸ್ಪಷ್ಟವಾದ ವಿಳಾಸವಿದೆ. ಅದಾಗಿಯೂ ಅನಗತ್ಯವಾಗಿ ತೊಂದರೆ ನೀಡುವುದಕ್ಕಾಗಿ ಈ ರೀತಿ ವರ್ತಿಸಲಾಗಿದೆ. ಕುಮಟಾ ತಹಶೀಲ್ದಾರ್ ಕಚೇರಿಯಿಂದ ಸಮಸ್ಯೆಯಾಗುತ್ತಿದೆ.’ ಎಂದವರು ದೂರಿದ್ದಾರೆ.
`ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ನನಗೆ ವೃದ್ದಾಪ್ಯ ವೇತನ ಅನಿವಾರ್ಯವಾಗಿದ್ದು, ಆದಾಯ ಪ್ರಮಾಣ ಪತ್ರ ಮಾಡಿಸಿ ಪಿಂಚಣಿಗೆ ಅರ್ಜಿ ಹಾಕಬೇಕಿತ್ತು. ಆದರೆ, ಸರ್ಕಾರದಿಂದ ಸಿಗುವ ಹಣಕ್ಕೂ ಅಧಿಕಾರಿಗಳು ಕಲ್ಲು ಹಾಕುತ್ತಿದ್ದಾರೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.
Discussion about this post