ಕಾರವಾರದ ಚಿತ್ತಾಕುಲ ಗ್ರಾಮ ಪಂಚಾಯತ ವ್ಯಾಪ್ತಿಯ ಕಸ ವಿಲೇವಾರಿ ಘಟಕದ ನಿರ್ವಹಣೆ ಸರಿಯಾಗಿಲ್ಲ. ಪರಿಣಾಮ ಆ ಪ್ರದೇಶ ಗಬ್ಬೆದ್ದಿದ್ದು, ಸದಾಶಿವಗಡ ಪ್ರೌಢಶಾಲೆ ಮಕ್ಕಳು ಮೂಗು ಮುಚ್ಚಿಕೊಂಡು ಪಾಠ ಕೇಳುತ್ತಿದ್ದಾರೆ!
ತ್ಯಾಜ್ಯ ವಿಲೇವಾರಿ ಘಟಕ ಗಬ್ಬೆದ್ದ ಪರಿಣಾಮ ಚಿತ್ತಾಕುಲ ಗ್ರಾಮದಲ್ಲಿ ಇದೀಗ ಉಸಿರಾಡಲು ಸಮಸ್ಯೆ ಆಗಿದೆ. ಅದರಲ್ಲಿಯೂ ಶಾಲಾ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಗ್ರಾಮ ಪಂಚಾಯತ ಊರ ನಡುವೆಯೇ ತ್ಯಾಜ್ಯ ಘಟಕ ನಿರ್ಮಿಸಿದ್ದು, ಪಕ್ಕದ ಕೆರೆ ಸಹ ತ್ಯಾಜ್ಯದಿಂದ ತುಂಬಿದೆ. ಆದರೆ, ಅದನ್ನು ಸ್ವಚ್ಚಗೊಳಿಸುವ ಕೆಲಸ ನಡೆದಿಲ್ಲ.
ತ್ಯಾಜ್ಯದ ರಾಶಿಯಿಂದ ಭಾರೀ ಪ್ರಮಾಣದಲ್ಲಿ ದುರ್ವಾಸನೆ ಬರುತ್ತಿದೆ. ಇದರಿಂದ ಶಾಲಾ ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಕ್ಕಪಕ್ಕದ ಮನೆಯವರು, ಪ್ರಾಥಮಿಕ ಆರೋಗ್ಯ ಕೇಂದ್ರದವರು ಸಹ ಇಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ. ಶಾಲಾ ಮಕ್ಕಳ ಸಮಸ್ಯೆ ತಪ್ಪಿಸಲು ಶಾಲೆಯ ಕಿಟಕಿ-ಬಾಗಿಲು ಮುಚ್ಚಲಾಗುತ್ತದೆ. ಆದರೂ, ಮಕ್ಕಳು ಮೂಗಿಗೆ ಬಟ್ಟೆ ಕಟ್ಟಿಕೊಂಡು ತರಗತಿಯಲ್ಲಿ ಕೂರುತ್ತಿದ್ದಾರೆ.
ತ್ಯಾಜ್ಯ ಘಟಕ ನಿರ್ಮಾಣಕ್ಕೂ ಮುನ್ನ ಜನ ವಿರೋಧಿಸಿದ್ದರು. ಆದರೆ, ಅದಕ್ಕೆ ಅಧಿಕಾರಿಗಳು ಸೊಪ್ಪು ಹಾಕಲಿಲ್ಲ. ಹೀಗಾಗಿ ಇದೀಗ ಊರಿನ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
Discussion about this post