ಯಲ್ಲಾಪುರದ ಕೊಡ್ಲಗದ್ದೆಯಲ್ಲಿರುವ ಸುಜಾತಾ ಗಾಂವ್ಕರ್ ಅವರು ತಮ್ಮ ಮಾವನ ಮೇಲೆ ಕಲ್ಲು ಎಸೆದಿದ್ದು, ರಾಮಚಂದ್ರ ಗಾಂವ್ಕರ್ ಅವರಿಗೆ ಗಾಯವಾಗಿದೆ.
ಯಲ್ಲಾಪುರದ ಕೊಡ್ಲಗದ್ದೆಯ ಸಾತನಗದ್ದೆ ಬಳಿಯಿರುವ ಗಣಪತಿ ಗಾಂವ್ಕರ್ ಹಾಗೂ ಅವರ ಅಣ್ಣ ಪ್ರಭಾಕರ ಗಾಂವ್ಕರ್ ಅವರ ನಡುವೆ ಜಮೀನು ವಿಷಯದಲ್ಲಿ ಜಗಳ ನಡೆಯುತ್ತಿದೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಗಾಗಿ ಈ ಸಹೋದರರ ನಡುವೆ ವೈಮನಸ್ಸು ಮೂಡಿದ್ದು, ಅದೇ ವಿಷಯ ಪದೇ ಪದೇ ಕಲಹಕ್ಕೆ ಕಾರಣವಾಗುತ್ತಿದೆ.
ಗಣಪತಿ ಗಾಂವ್ಕರ್ ಹಾಗೂ ಪ್ರಭಾಕರ ಗಾಂವ್ಕರ್ ಅವರ ತಂದೆ ರಾಮಚಂದ್ರ ಗಾಂವ್ಕರ್ ಅವರು ದೇವರ ಪೂಜೆಗೆ ಹೂವು ತರಲು ಹೋಗಿದ್ದಾಗಲೂ ಭೂಮಿ ವಿಷಯವಾಗಿ ವಾಕ್ಸಮರ ನಡೆದಿದ್ದು, ಈ ವೇಳೆ ಪ್ರಭಾಕರ ಗಾಂವ್ಕರ್ ಅವರ ಪತ್ನಿ ಸುಜಾತಾ ಗಾಂವ್ಕರ್ ಅವರು ರಾಮಚಂದ್ರ ಗಾಂವ್ಕರ್ ಅವರನ್ನು ನಿಂದಿಸಿದ್ದಾರೆ. ಸೆ ೧೧ರಂದು ರಾಮಚಂದ್ರ ಗಾಂವ್ಕರ್ ಅವರು ಹೂವು ಕೊಯ್ಯುತ್ತಿರುವಾಗ ಸುಜಾತಾ ಗಾಂವ್ಕರ್ ಅವರು `ನಮ್ಮನೆ ದಾರಿಗೆ ಏಕೆ ಬಂದೆ?’ ಎಂದು ಪ್ರಶ್ನಿಸಿದ್ದಾರೆ. ಅದಾದ ನಂತರ ಮಾವನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಪರಿಣಾಮ ರಾಮಚಂದ್ರ ಗಾಂವ್ಕರ್ ಅವರ ಕಣ್ಣಿನ ಕೆಳಗೆ ಕಲ್ಲು ತಾಗಿದೆ. ಅಲ್ಲಿ ರಕ್ತ ಬಂದಿದ್ದು, ರಾಮಚಂದ್ರ ಗಾಂವ್ಕರ್ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ. ಅದಾದ ನಂತರ ಗಣಪತಿ ಗಾಂವ್ಕರ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discussion about this post