ಶಿರಸಿಯ ಚಿಪಗಿ ಅರಣ್ಯ ಪ್ರದೇಶದಲ್ಲಿ ಸೀಸಂ ಮರ ಕಡಿದ ಆರೋಪದ ಅಡಿ ವಿನಾಯಕ ಹೆಗಡೆ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ವಿನಾಯಕ ಹೆಗಡೆ ಒಬ್ಬರೇ ಅಷ್ಟು ದೊಡ್ಡ ಮರ ಕಡಿದು ಸಾಗಿಸುವ ಪ್ರಯತ್ನ ಮಾಡಲು ಅಸಾಧ್ಯವಾಗಿದ್ದು, ಅವರ ಜೊತೆ ಕೈ ಜೋಡಿಸಿದವರ ಹುಡುಕಾಟ ಮುಂದುವರೆದಿದೆ.
ಶಿರಸಿಯ ಚಿಪಗಿ ಅರಣ್ಯ ಪ್ರದೇಶದಲ್ಲಿ ಎರಡು ಸೀಸಂ ಮರ ಕಡಿತವಾದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಉಪರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ಸೇರಿ ಕಾಡು ಕಡಿದ ಕಳ್ಳರಿಗಾಗಿ ಹುಡುಕಾಟ ಶುರು ಮಾಡಿದ್ದರು. ಮರ ಕಟಾವು ಮಾಡಿದವರು ಕಾಡಿನಲ್ಲಿಯೇ ನಾಟ ಸಿದ್ದಪಡಿಸಿದ್ದರು. ಸೋಮವಾರ ಅದನ್ನು ಸಾಗಾಟ ಮಾಡುವ ಸಿದ್ಧತೆಯಲ್ಲಿದ್ದಾಗ ಅದನ್ನು ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ತಡೆದರು.
ಈ ವೇಳೆ ಚಿಪಗಿಯ ವಿನಾಯಕ ಹೆಗಡೆ ಸಿಕ್ಕಿಬಿದ್ದರು. ಎರಡು ಮರ ಕಟಾವು ನಡೆಸಿ ಅದರ ನಾಟಾ ಸಿದ್ಧಪಡಿಸುವವರೆಗಿನ ಎಲ್ಲಾ ಕೆಲಸವನ್ನು ವಿನಾಯಕ ಹೆಗಡೆ ಒಬ್ಬರೇ ಮಾಡಲು ಸಾಧ್ಯವಿರಲಿಲ್ಲ. ಅದಾಗಿಯೂ ಅರಣ್ಯಾಧಿಕಾರಿಗಳು ವಿನಾಯಕ ಹೆಗಡೆ ಅವರನ್ನು ಮಾತ್ರ ಬಂಧಿಸಿದರು. ಉಳಿದವರ ಬಗ್ಗೆ ವಿನಾಯಕ ಹೆಗಡೆ ಅವರು ಎಷ್ಟು ಕೇಳಿದರೂ ಬಾಯ್ಬಿಡಲಿಲ್ಲ. ಅರಣ್ಯ ಅಧಿಕಾರಿ-ಸಿಬ್ಬಂದಿ ಬಳಿಯೂ ಸತ್ಯ ಹೊರ ಹಾಕಲು ಸಾಧ್ಯವಾಗಲಿಲ್ಲ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಉಪವಲಯ ಅರಣ್ಯಾಧಿಕಾರಿ ಐಶ್ವರ್ಯ ನಾಯಕ ಅವರು ಅಲ್ಲಿದ್ದ ನಾಟಾ ಲೆಕ್ಕ ಮಾಡಿದರು. 9 ನಗಗಳ 942 ಕ್ಯೂಮೀ ಹಾಗೂ 1.250ಕ್ಯೂಮೀ ನಾಟಾವನ್ನು ಅರಣ್ಯ ಸಿಬ್ಬಂದಿ ಮಂಜುನಾಥ ಶಿಗ್ಲಿ, ಗುಡ್ಡಪ್ಪ ಸೊಪ್ಪಿನ್ ವಶಕ್ಕೆಪಡೆದು ಇಲಾಖೆಗೆ ಹಸ್ತಾಂತರಿಸಿದರು. ವಿನಾಯಕ ಹೆಗಡೆ ಅವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
Discussion about this post