ಗೋಕರ್ಣದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ. ಹೊಟೇಲಿನಲ್ಲಿ ಕೆಲಸ ಮಾಡುವ ಪ್ರದೀಪಕುಮಾರ ಹಾಗೂ ಪ್ರವಾಸಿಗ ಮಹಮದ್ ಇಕ್ಬಾಲ್ ಎಂಬಾತರು ಗಾಂಜಾ ನಶೆಯಲ್ಲಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಪ್ರದೀಪಕುಮಾರ ಮಲಕರಾಜ್ ಅವರು ಗೋಕರ್ಣದ ಕುಡ್ಲೆ ಕಡಲತೀರದಲ್ಲಿರುವ ಡಿ ಎಸ್ ಕಫೆಯಲ್ಲಿ ಕೆಲಸ ಮಾಡುತ್ತಾರೆ. ಮಾದಕ ವ್ಯಸನಕ್ಕೆ ಒಳಗಾಗಿರುವ ಅವರು ಬಿಡುವಿನ ವೇಳೆಯಲ್ಲೆಲ್ಲ ಗಾಂಜಾ ಸೇವಿಸುತ್ತಿದ್ದರು. ಸೆ 13ರಂದು ಬಂಗ್ಲೆಗುಡ್ಡದ ವೇದಿಕಾ ವಿಲೇಜ್ ಹೋಂ ಸ್ಟೇ ಎದುರಿನ ರಸ್ತೆಯಲ್ಲಿ ಅಮಲಿನಲ್ಲಿ ಅಲೆದಾಡುತ್ತಿರುವ ಅವರನ್ನು ಪಿಎಸ್‌ಐ ಶಶಿಧರ್ ಎಚ್ ಕೆ ಅವರು ವಿಚಾರಣೆಗೆ ಒಳಪಡಿಸಿದರು. ಸರಿಯಾಗಿ ಮಾತನಾಡದ ಕಾರಣ ಪ್ರದೀಪಕುಮಾರ್ ಅವರನ್ನು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದರು. ಆ ವೇಳೆ ಅವರು ಗಾಂಜಾ ಸೇವಿಸಿರುವುದು ದೃಢವಾಯಿತು. ಹೀಗಾಗಿ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
ಬೆಂಗಳೂರಿನ ಪ್ರವಾಸಿಗ ಮಹಮದ್ ಇಕ್ಬಾಲ್ ಸಹ ಗಾಂಜಾ ನಶೆಯಲ್ಲಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಸೆ 13ರ ರಾತ್ರಿ ಮಹಮದ್ ಇಕ್ಬಾಲ್ ಅವರು ಓಂ ಕಡಲತೀರದ ಬಳಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದರು. ಗೋಕರ್ಣ ಪಿಎಸ್‌ಐ ಖಾದರ್ ಭಾಷಾ ಅವರು ಖಡಕ್ ಆಗಿ ವಿಚಾರಣೆ ಮಾಡಿದರು. ಆದರೆ, ಮಹಮದ್ ಇಕ್ಬಾಲ್ ಬಾಯಿ ಬಿಡಲಿಲ್ಲ. ಹೀಗಾಗಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ದೃಢವಾಯಿತು.
ದಾಖಲೆಗಳ ಆಧಾರದ ಅಡಿ ಮಾದಕ ವ್ಯಸನಿಗಳ ವಿರುದ್ಧ ಪೊಲೀಸರು ಪ್ರರಕಣ ದಾಖಲಿಸಿದರು. ಜಮ್ಮು ಕಾಶ್ಮೀರದ ಪ್ರದೀಪಕುಮಾರ ಮಲಕರಾಜ್ ಹಾಗೂ ಬೆಂಗಳೂರಿನ ಮಹಮದ್ ಇಕ್ಬಾಲ್ ಇಬ್ಬರು ಮಾದಕ ವ್ಯಸನ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರಿಂದ ಇದೀಗ ನ್ಯಾಯಾಲಯಕ್ಕೆ ಅಲೆದಾಡುವುದು ಅನಿವಾರ್ಯವಾಗಿದೆ.
Discussion about this post